ಸಂಪಾದಕರು : ರಾಮಚಂದ್ರಪ್ಪ ಪೂಜೇರ
ಎಸ್ಎಸ್ಎಲ್ಸಿಮಾರ್ಕ್ಸ್ ಕಾರ್ಡ್ ನಲ್ಲಿ ಹಿಂದಿಗೆ ವಿದಾಯ…..
ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ತಗ್ಗಿಸಲು ಮತ್ತು ಪರೀಕ್ಷಾ ಭಯದಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಇಂದು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ನೀಡಿದ್ದಾರೆ ಈ ಅಧಿಕೃತ ಘೋಷಣೆಯ ಪ್ರಕಾರ ಇನ್ನು ಮುಂದೆ ಫಲಿತಾಂಶದಲ್ಲಿ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಅಂಕಗಳಿಗೆ ಸೇರಿಸಲಾಗುವುದಿಲ್ಲ ಎಂದು ತಿಳಿಸಿದರು.
ಈ ನಿರ್ಧಾರವು ಕನ್ನಡ ಪರ ಸಂಘಟನೆಗಳ ದೀರ್ಘಕಾಲದ ಹೋರಾಟದ ಫಲವಾಗಿ ಹೊರಬಂದಿದೆ. ಈ ಸಂಘಟನೆಗಳು ಹಿಂದಿಯನ್ನು ಕಡ್ಡಾಯಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ, ಅದನ್ನು ಅಂಕಗಳ ಲೆಕ್ಕದಿಂದ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದವು.
ಇಂದು ನಡೆದ ಚರ್ಚೆಗಳ ಬಳಿಕ, ಸಚಿವರು ಮುಖ್ಯ ಮಂತ್ರಿಯಾದ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಹೊಸ ನಿಯಮದ ಪ್ರಕಾರ ತೃತೀಯ ಭಾಷೆ ಇನ್ಮುಂದೆ ‘ಗ್ರೇಡಿಂಗ್’ ಮಾತ್ರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ (ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ) ಅಂಕಗಳ ಬದಲಿಗೆ ‘ಗ್ರೇಡ್’ ವ್ಯವಸ್ಥೆ ಜಾರಿಗೆ ತರಲಾಗುವುದು ಹಾಗೂ ವಿಷಯದ ಮಹತ್ವ ಉಳಿಸಿಕೊಂಡು, ಅಂಕಗಳ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ.ಇದರಿಂದ ಈ ವಿಷಯದಲ್ಲಿ ‘ಪಾಸ್-ಫೇಲ್’ ಎಂಬ ಆತಂಕ ವಿದ್ಯಾರ್ಥಿಗಳಿಗೆ ಇರುವುದಿಲ್ಲ, ಆದರೂ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ಈ ಬದಲಾವಣೆಯ ಪರಿಣಾಮವಾಗಿ, ಒಟ್ಟು ಅಂಕಗಳ ಪ್ರಮಾಣವು 625ರಿಂದ 525ಕ್ಕೆ ಇಳಿಕೆಯಾಗುತ್ತದೆ. ಹಿಂದಿನಂತೆ 100 ಅಂಕಗಳ ಹಿಂದಿ ವಿಷಯವನ್ನು ಒಟ್ಟು ಲೆಕ್ಕದಲ್ಲಿ ಪರಿಗಣಿಸಲಾಗುವುದಿಲ್ಲ. ಇದೇ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ. ಹಾಗೂ
🖋ನೈತಿಕ ಶಿಕ್ಷಣಕ್ಕೆ ಆದ್ಯತೆ: ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಲು ಪ್ರಸಕ್ತ ಸಾಲಿನಿಂದಲೇ ‘ನೈತಿಕ ಶಿಕ್ಷಣ’ (Moral Science) ಪಠ್ಯವನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದಿಂದಲೇ ಉಚಿತ ಪುಸ್ತಕಗಳ ವಿತರಣೆ ನಡೆಯಲಿದೆ.
🖋 ಮಕ್ಕಳ ಡಿಜಿಟಲ್ ಸುರಕ್ಷತೆ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಯ ನಿರ್ಬಂಧದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದಿದ್ದು, ಪೋಷಕರು ಈ ಬಗ್ಗೆ ಜಾಗೃತೆ ವಹಿಸಬೇಕೆಂದು ತಿಳಿಸಿದರು.
ಭಾಷಾ ನೀತಿಯ ದೃಷ್ಟಿಯಿಂದ ಈ ನಿರ್ಧಾರ ಗಮನಾರ್ಹವಾಗಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದು ಹಾಗೂ ವಿದ್ಯಾರ್ಥಿಗಳ ಮೇಲೆ ಅನ್ಯ ಭಾಷೆಯ ಅಂಕಗಳ ಒತ್ತಡ ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ತೃತೀಯ ಭಾಷೆಯಾಗಿ ಹಿಂದಿಯಷ್ಟೇ ಅಲ್ಲದೆ, ಯಾವುದೇ ಭಾಷೆ ಆಯ್ಕೆ ಮಾಡಿಕೊಂಡರೂ ಇದೇ ನಿಯಮ ಅನ್ವಯವಾಗಲಿದೆ.ಈ ತೀರ್ಮಾನಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದರಿಂದ ವಿದ್ಯಾರ್ಥಿಗಳ ಒತ್ತಡ ಕಡಿಮೆಯಾಗುತ್ತದೆ ಎಂದು ಸಂತೋಷಪಟ್ಟರೆ, ಇನ್ನೂ ಕೆಲವರು ಭಾಷಾ ಕಲಿಕೆಯ ಮೇಲೆ ಪರಿಣಾಮ ಬೀರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಕನ್ನಡ ಪರ ಸಂಘಟನೆಗಳು ಸರ್ಕಾರದ ಈ ಹೆಜ್ಜೆಯನ್ನು ಸ್ವಾಗತಿಸಿವೆ.

ನಮ್ಮ ಗುರಿ: ಒತ್ತಡ ಮುಕ್ತ ಶಿಕ್ಷಣ, ಮೌಲ್ಯಯುತ ಭವಿಷ್ಯ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ…
