ಬಾಗಲಕೋಟೆ, ಮಾ.14:
“ಮೇಟಿ ಅವರದ್ದು ರಾಜಕಾರಣವನ್ನು ಸೇವೆ ಎಂದು ಕಂಡ ವ್ಯಕ್ತಿತ್ವ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.
ಬಾಗಲಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಇಂದು ಮೇಟಿ ಅವರು ನಮ್ಮೊಂದಿಗೆ ಇಲ್ಲ. ಅವರು ಇಲ್ಲದಿದ್ದರೂ ಅವರ ಆಲೋಚನೆ, ಪರಿಶ್ರಮ, ಚಿಂತನೆ ಉಳಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಅಧಿಕಾರಕ್ಕಿಂತ ಆದರ್ಶಗಳು ಬಹಳ ಮುಖ್ಯವಾದದ್ದು ಎಂದು ನಂಬಿದ್ದ ನಾಯಕ ಮೇಟಿ ಅವರು. ಜನರ ನೋವಿಗೆ ಸ್ಪಂದಿಸಿದ ಮೇಟಿ ಅವರು ಸದಾ ಜನರ ನೆನಪಿನಲ್ಲಿ ಉಳಿಯಲಿದ್ದಾರೆ. ರಾಜಕಾರಣವನ್ನು ಸೇವೆ ಎಂದು ಕಂಡ ವ್ಯಕ್ತಿತ್ವ ನನ್ನ ಸ್ನೇಹಿತ ಮೇಟಿ ಅವರದ್ದು. ಜನಸಾಮಾನ್ಯರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದರು” ಎಂದು ಕೊಂಡಾಡಿದರು.
“ಇದು ಸಮಾಜದ ಋಣ ತೀರಿಸುವ ಕಾರ್ಯಕ್ರಮ. ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ ಒಂದು ಮಾತು ಹೇಳುತ್ತಾನೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದೊಂದಿಗೆ ಹುಟ್ಟುತ್ತಾನೆ. ತಂದೆ ತಾಯಿ ಋಣ, ದೇವರ ಋಣ, ಗುರುವಿನ ಋಣ ಹಾಗೂ ಸಮಾಜದ ಋಣ. ಈ ನಾಲ್ಕು ಋಣಗಳನ್ನು ಧರ್ಮದಿಂದ ತೀರಿಸಬೇಕು ಎಂದು ಹೇಳುತ್ತಾನೆ. ಅದೇ ರೀತಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ 14 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಗೆಲ್ಲಿಸಿ, ರಾಜ್ಯದಲ್ಲಿ ಬಲಿಷ್ಠವಾದ ಕಾಂಗ್ರೆಸ್ ಸರ್ಕಾರ ತಂದ ಈ ಭಾಗದ ಜನರ ಋಣ ತೀರಿಸಲು ನಾವು ಇಲ್ಲಿಗೆ ಬಂದಿದ್ದೇವೆ” ಎಂದರು
