Saturday, March 14, 2026
Homeಬೆಂಗಳೂರುಯಶವಂತಪುರದಲ್ಲಿ ಟೆಕ್ಸ್‌ಟೈಲ್‌ ಮಾರ್ಕೆಟ್‌: ಮುಖ್ಯಮಂತ್ರಿಗಳೊಂದಿಗೆ ಜೊತೆ ಚರ್ಚಿಸಿ ಶೀಘ್ರ ಶಂಕುಸ್ಥಾಪನೆ: ಜವಳಿ ಸಚಿವ ಶಿವಾನಂದ ಪಾಟೀಲ...

ಯಶವಂತಪುರದಲ್ಲಿ ಟೆಕ್ಸ್‌ಟೈಲ್‌ ಮಾರ್ಕೆಟ್‌: ಮುಖ್ಯಮಂತ್ರಿಗಳೊಂದಿಗೆ ಜೊತೆ ಚರ್ಚಿಸಿ ಶೀಘ್ರ ಶಂಕುಸ್ಥಾಪನೆ: ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ

ಬೆಂಗಳೂರು: ಪಾರಂಪರಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಉತ್ಪನ್ನಗಳಿಗೆ ನಮ್ಮಲ್ಲೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಯಶವಂತಪುರದಲ್ಲಿರುವ ಇಲಾಖೆಯ ಒಂದೂವರೆ ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ,ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ರಾಜಾಜಿನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಸ್ಟೇಡಿಯಂನಲ್ಲಿ 14 ದಿನಗಳ ಭಾರತೀಯ ಕೈಮಗ್ಗ ಪರಂಪರೆ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಜೊತೆ ಚರ್ಚಿಸಿ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪಾರಂಪರಿಕ ಕಲೆ ನಶಿಸಿ ಹೋಗುತ್ತಿದೆ. ಈ ಕಲೆಯನ್ನು ಉಳಿಸಿ ಬೆಳೆಸಲು ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಕಲ್ಪಿಸಬೇಕಾಗಿದೆ. ಯಶವಂತಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದಲ್ಲಿ ಕೈಮಗ್ಗ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆ, ಕುಂಬಾರಿಕೆ ಸೇರಿದಂತೆ ಎಲ್ಲ ರೀತಿಯ ಪಾರಂಪರಿಕ ಕಲೆಯ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಕೈಮಗ್ಗ ಉತ್ಪನ್ನಗಳು ಹೊರ ರಾಜ್ಯಗಳಲ್ಲಿ ಬೇರೆ ಬೇರೆ ಬ್ರಾಂಡ್‌ಗಳಲ್ಲಿ ಮಾರಾಟವಾಗುತ್ತಿವೆ. ನಮ್ಮದೇ ಉತ್ಪನ್ನಗಳು ಬೇರೆ ರಾಜ್ಯಗಳಿಂದ ಬೇರೆ ಬ್ರಾಂಡ್‌ಗಳ ರೂಪದಲ್ಲಿ ರಾಜ್ಯಕ್ಕೆ ಬರುತ್ತಿವೆ. ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೈಮಗ್ಗ ಕೇವಲ ಉತ್ಪಾದನಾ ಕ್ಷೇತ್ರವಷ್ಟೇ ಅಲ್ಲ, ಅದು ಭಾರತದ ಸಾಂಸ್ಕೃತಿಕ ಗುರುತು. ಕೈಗಾರಿಕೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಜೀವಂತ ಸಂಪ್ರದಾಯ ಎಂದು ಸಚಿವರು ಬಣ್ಣಿಸಿದರು.

ನಮ್ಮ ನೇಕಾರರು ಪೀಳಿಗೆಯಿಂದ ಪೀಳಿಗೆಗೆ ತಂತ್ರಜ್ಞಾನ ಹಾಗೂ ವಿನ್ಯಾಸವನ್ನು ಸಂರಕ್ಷಣೆ ಮಾಡಿಕೊಂಡು ಬಂದಿದ್ದು, ಅದರ ಫಲವಾಗಿ ಭಾರತೀಯ ಕೈಮಗ್ಗ ಉತ್ಪನ್ನಗಳು ವಿಶ್ವದಾದ್ಯತ ಪ್ರಶಂಸೆಗೆ ಪಾತ್ರವಾಗಿವೆ ಎಂದರು.

ಕಾವೇರಿ ಹ್ಯಾಂಡ್‌ ಲೂಮ್‌ ಅಧ್ಯಕ್ಷ ಬಿ.ಜೆ. ಗಣೇಶ್‌ ಅವರು ಕೈಮಗ್ಗ ಉತ್ಪನ್ನಗಳು ಸೇರಿ ಸಾಂಪ್ರದಾಯಿಕ ಕಲೆಯ ಎಲ್ಲ ಉತ್ಪನ್ನಗಳು ಒಂದೇ ಸೂರಿನಡಿ ಸಿಗುವಂತೆ ಮಾರುಕಟ್ಟೆ ಕಲ್ಪಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದರು.

ಜವಳಿ ಇಲಾಖೆ ಅಧಿಕಾರಿಗಳಾದ ಪ್ರಭಾ ಕರಣ್‌, ಪ್ರಕಾಶ್‌, ಯೋಗೇಶ್‌ ಉಪಸ್ಥಿತರಿದ್ದರು.

ಮೇಳದಲ್ಲಿ 80 ಮಳಿಗೆಗಳಿದ್ದು, ರಾಜ್ಯದ ಕೈಮಗ್ಗ ಉತ್ಪನ್ನಗಳೊಂದಿಗೆ ಕಾಶ್ಮೀರ, ಹರಿಯಾಣ, ರಾಜಸ್ಥಾನ ಹಾಗೂ ಇತರ ಹಲವು ರಾಜ್ಯಗಳ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ.

• ಅಂತಿಮ ಹಂತದಲ್ಲಿ ಜವಳಿ ನೀತಿ
2026-30 ಅವಧಿಯ ನೂತನ ಜವಳಿ ನೀತಿ ಅಂತಿಮ ಹಂತಕ್ಕೆ ಬಂದಿದೆ. ಮೆಗಾ ಮತ್ತು ಮಿನಿ ಇಂಡಸ್ಟ್ರೀಸ್‌ಗಳನ್ನು ಒಂದೇ ಸೂರಿನ ಅಡಿಯಲ್ಲಿ ತರುವ ಪ್ರಯತ್ನ ನಡೆದಿದೆ ಎಂದು ಶಿವಾನಂದ ಪಾಟೀಲ ಹೇಳಿದರು.

ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಪಿಎಂ ಮಿತ್ರ ನೂಲಿನಿಂದ ಬಟ್ಟೆ ಹಂತದವರೆಗೆ ಎಲ್ಲ ಚಟುವಟಿಕೆಗಳು ಪಾರ್ಕ್‌ನಲ್ಲಿ ಒಂದೇ ಸೂರಿನ ಅಡಿಯಲ್ಲಿ ಬರಲಿವೆ. ಈ ಯೋಜನೆ ಅನುಷ್ಠಾನವಾದರೆ ಕರ್ನಾಟಕದಲ್ಲಿ ಮೈಲಿಗಲ್ಲಾಗಲಿದೆ ಎಂದರು.

ಫೋಟೋ ಕ್ಯಾಪ್ಷನ್‌

  1. ಬೆಂಗಳೂರಿನಲ್ಲಿ ಆಯೋಜಿಸಿರುವ ಭಾರತೀಯ ಕೈಮಗ್ಗ ಪರಂಪರೆ ಪ್ರದರ್ಶನ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಅವರು ಮಳಿಗೆಗಳಿಗೆ ಭೇಟಿ ನೀಡಿ ಕೈಮಗ್ಗ ಉತ್ಪನ್ನಗಳನ್ನು ವೀಕ್ಷಿಸಿದರು.
  2. ಕೈಮಗ್ಗದಲ್ಲಿ ವರನಟ ಡಾ. ರಾಜಕುಮಾರ್‌ ಮತ್ತು ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರ ನೇಯ್ದ ಬಟ್ಟೆಯನ್ನು ವೀಕ್ಷಿಸಿದ ಸಚಿವ ಶಿವಾನಂದ ಪಾಟೀಲ ಅವರು ನೇಕಾರರಿಂದ ಮಾಹಿತಿ ಪಡೆದರು.

ಹೆಚ್ಚಿನ ಸುದ್ದಿ