ಬೆಂಗಳೂರು, ಮಾ.10: ಎಪಿಎಸ್ ಶಿಕ್ಷಣ ಸಂಸ್ಥೆಗಳಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅಮಿತೋತ್ಸಾಹದಿಂದ ಆಚರಿಸಲಾಯಿತು.ಪ್ರೊ. ಎನ್. ಅನಂತಾ ಸಭಾಂಗಣದಲ್ಲಿ ಗಣ್ಯ ಅತಿಥಿಗಳು, ಟ್ರಸ್ಟಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾದ ಅಹಲ್ಯಶರ್ಮಾ ಭಾಗವಹಿಸಿ ಮಹಿಳೆಯ ಸಾಧನೆಯ ಬಗ್ಗೆ ಬೆಳಕು ಚೆಲ್ಲಿದರು. ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಧ್ಯಕ್ಷ ಸಿಎ ಡಾ. ವಿಷ್ಣುಭರತ್ ಅಲಂಪಲ್ಲಿ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ರಚನಾತ್ಮಕ ಪಾತ್ರ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಇಂದು ಕ್ರೀಡೆ, ಸೇನೆ ಸೇರಿದಂತೆ ಎಲ್ಲಾ ವಲಯಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದು, ದೇಶದ ಭವಿಷ್ಯದಲ್ಲಿ ಮಹಿಳೆಯರು ಅನನ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಆರ್ಥಿಕ ಮಿತವ್ಯಯ, ಉಳಿತಾಯದ ಮೂಲಕ ಮಹಿಳೆ ಕುಟುಂಬ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾಳೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿಗಳು, ಅವರ ಕುಟುಂಬದ ಮಹಿಳಾ ಸದಸ್ಯರನ್ನು ಗೌರವಿಸಲಾಯಿತು. ಮಹಿಳಾ ಸಿಬ್ಬಂದಿಗೆ ಸಂಪ್ರದಾಯ ಬದ್ಧವಾಗಿ ಅರಿಶಿನ-ಕುಂಕುಮ, ಗಾಜಿನ ಬಳೆಗಳು ಮತ್ತು ಹೂವುಗಳನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಅಹಲ್ಯಾ ಶರ್ಮ ಮತ್ತಿತರರು ಉಪಸ್ಥಿತರಿದ್ದರು.
