Friday, March 27, 2026
HomeUncategorizedಐವತ್ತು ವರ್ಷದ ರಾಜಕೀಯ ಪಯಣ: ಕಲ್ಲು ಮುಳ್ಳು ಹಾದಿಯಿಂದ ಸುವರ್ಣ ಮಾರ್ಗವಾ

ಐವತ್ತು ವರ್ಷದ ರಾಜಕೀಯ ಪಯಣ: ಕಲ್ಲು ಮುಳ್ಳು ಹಾದಿಯಿಂದ ಸುವರ್ಣ ಮಾರ್ಗವಾ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಳೆದ ಐದು ದಶಕಗಳನ್ನು ಅವಲೋಕಿಸಿದಾಗ, ಒಂದು ಹೆಸರು ಯಾವತ್ತೂ ನೆನಪಿಗೆ ಬರುತ್ತದೆ ಅದೇ — ಶ್ರೀ ಬಿ. ಎಸ್. ಯಡಿಯೂರಪ್ಪ. ಸುಮಾರು 50 ವರ್ಷಗಳ ಸುಧೀರ್ಘ ಸಾರ್ವಜನಿಕ ಜೀವನ, ಹೋರಾಟ, ಸಂಘಟನೆ ಮತ್ತು ಆಡಳಿತದ ಅನುಭವವು ಅವರನ್ನು ಕೇವಲ ಪಕ್ಷದ ನಾಯಕನಷ್ಟೇ ಅಲ್ಲ, ರಾಜಕೀಯ ವಿಶ್ವವಿದ್ಯಾಲಯ ಕೇಂದ್ರವಾಗಿದ್ದಾರೆ ಎಂದು ಪ್ರಖ್ಯಾತ ವಕೀಲರು ಬಿಜೆಪಿ ಮುಖಂಡರಾದ ರವಿ ಖಾನಾಪುರ ಹೇಳಿದರು

BSY ರಾಜಕೀಯ ಜೀವನ ಕಲ್ಲು ಮುಳ್ಳು ಹಾದಿಯಿಂದ ಸುವರ್ಣ ಮಾರ್ಗವಾದ ಪರಿ.

ಸಂಘದಿಂದ ಜನಸಂಘದವರೆಗೆ – ತತ್ವಾಧಾರಿತ ಆರಂಭ

ಯಡಿಯೂರಪ್ಪನವರ ರಾಜಕೀಯ ಪಯಣವು ರಾಷ್ಟೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಆರಂಭವಾಗಿ, ಭಾರತೀಯ ಜನ ಸಂಘ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿತು. ಆ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಸಂಘಟಿತ ಬಲ ಹೊಂದದಿದ್ದ ಪಕ್ಷದ ಕಾರ್ಯವ್ಯಾಪ್ತಿಯನ್ನು ಗ್ರಾಮೀಣ ಹಂತಕ್ಕೆ ವಿಸ್ತರಿಸುವುದು ದೊಡ್ಡ ಸವಾಲಾಗಿತ್ತು. ಆದರೆ, ಯಡಿಯೂರಪ್ಪನವರು ಅದನ್ನು ಒಂದು ದೀರ್ಘಕಾಲಿಕ ಸಂಘಟನಾ ಹೋರಾಟವಾಗಿ ಪರಿಗಣಿಸಿದರು.

ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಆರಂಭದಲ್ಲಿ ನಗರಮಟ್ಟಕ್ಕೆ ಸೀಮಿತವಾಗಿದ್ದ ಪಕ್ಷ. ಸಾಮಕಾಲಿನ ನಾಯಕರೊಂದಿಗೆ ಯಡಿಯೂರಪ್ಪನವರು ಜೊತೆಗೂಡಿಸಿಕೊಂಡು , ಗ್ರಾಮೀಣ ಭಾಗಗಳಲ್ಲಿ ಪಕ್ಷದ ಬಲವರ್ಧನೆಗೆ ನಡೆ ನುಡಿಯಲ್ಲಿ ಒಂದಾಗಿ ದುಡಿದರು.

ಅವರ ಸಂಘಟನಾ ಶೈಲಿ ವಿಶೇಷವಾಗಿತ್ತು —
• ಕಾರ್ಯಕರ್ತರೊಂದಿಗೆ ನೇರ ಸಂಪರ್ಕ
• ಹಳ್ಳಿಹಳ್ಳಿಗೆ ಪ್ರವಾಸ
• ರೈತ ಸಮುದಾಯದ ನಂಬಿಕೆ ಗಳಿಕೆ
• ಸಮಾನತೆಯ ರಾಜಕೀಯ ಭಾಷ್ಯ

ಈ ಕ್ರಮಗಳು ಬಿಜೆಪಿಯನ್ನು ಕೇವಲ ಒಂದು ಪರ್ಯಾಯ ಪಕ್ಷದಿಂದ, ಆಡಳಿತದ ಪರ್ಯಾಯವಾಗಿಸುವಲ್ಲಿ ಮಹತ್ವದ ಪಾತ್ರವಹಿಸಿತು.

ದಕ್ಷಿಣ ಭಾರತದ ರಾಜಕೀಯದಲ್ಲಿ ಮೈಲಿಗಲ್ಲು

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವುದು ದಕ್ಷಿಣ ಭಾರತದ ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೇರಿದಾಗ, ಅದು ಕೇವಲ ಒಂದು ಸರ್ಕಾರದ ರಚನೆ ಅಷ್ಟೇ ಆಗಿರಲಿಲ್ಲ; ಅದು ದಕ್ಷಿಣದಲ್ಲಿ ಪಕ್ಷದ ವಿಸ್ತಾರದ ಸಂಕೇತವಾಗಿತ್ತು.

ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಅವರು, ರೈತಪರ, ಸಮಾಜಮುಖಿ ಮತ್ತು ಮೂಲಸೌಕರ್ಯಾಭಿವೃದ್ಧಿಗೆ ಒತ್ತು ನೀಡಿದ ನಿರ್ಣಯಗಳನ್ನು ಕೈಗೊಂಡರು. “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂಬ ಸಾಮಾಜಿಕ ನ್ಯಾಯದ ಆಶಯವನ್ನು ಅವರು ತಮ್ಮ ಆಡಳಿತದ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡಿದ್ದರು.

ರೈತನಾಯಕನ ಪ್ರಭಾವ

ಯಡಿಯೂರಪ್ಪನವರ ರಾಜಕೀಯ ಗುರುತುಗಳಲ್ಲಿ ಪ್ರಮುಖವಾದುದು — ರೈತನಾಯಕ ಎಂಬ ಬಿರುದು. ರೈತ ಸಮಸ್ಯೆಗಳ ಕುರಿತು ಸ್ಪಷ್ಟ ನಿಲುವು, ಬೆಳೆ ಪರಿಹಾರ, ನೀರಾವರಿ ಯೋಜನೆಗಳ ಬಲವರ್ಧನೆ ಮುಂತಾದ ಕ್ರಮಗಳು ಅವರ ಜನಪರ ಆಡಳಿತದ ಭಾಗವಾಗಿದ್ದವು.

ರಾಜ್ಯದ ಮೂಲೆಮೂಲೆಗೆ ಪ್ರವಾಸ ಮಾಡಿ, ಕಾರ್ಯಕರ್ತರ ಮನಸ್ಸಿನಲ್ಲಿ “ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಯಡಿಯೂರಪ್ಪ” ಎನ್ನುವ ಮಟ್ಟಿನ ನಂಟು ನಿರ್ಮಿಸಿರುವುದು ಅವರ ಸಂಘಟನಾ ಸಾಮರ್ಥ್ಯದ ಪ್ರತೀಕವಾಗಿದೆ.

ಸುವರ್ಣ ಮಹೋತ್ಸವ – ಒಂದು ರಾಜಕೀಯ ಕ್ಷಣವಾಗಲಿ

ಈ ವಸಂತವು ಅವರ ಸಾರ್ವಜನಿಕ ಸೇವಾ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತಿರುವುದು ಕೇವಲ ವೈಯಕ್ತಿಕ ಸಾಧನೆಯಲ್ಲ; ಅದು ಕರ್ನಾಟಕದ ರಾಜಕೀಯ ಪಯಣದ ಒಂದು ಅಧ್ಯಾಯ. ಈ ಸುವರ್ಣ ಮಹೋತ್ಸವವನ್ನು ರಾಜ್ಯದ ತಂಡ ಅಭೂತಪೂರ್ವವಾಗಿ ಆಚರಿಸಲು ಸಜ್ಜಾಗಿರುವುದು, ಅವರ ಪ್ರಭಾವ ಮತ್ತು ಪ್ರೇರಣೆಯ ಪ್ರತಿಬಿಂಬ ಎಂದ್ರೆ ಅತಿಶಯೋಕ್ತಿ ಆಗಲ್ಲ.

ಇಂದು ಕರ್ನಾಟಕ ಬಿಜೆಪಿ ನೇತೃತ್ವ ವಹಿಸಿ ಕಾರ್ಯನಿರ್ವಹಿಸುತ್ತಿರುವ ಅವರ ಸುಪುತ್ರ ಶ್ರೀ ಬಿ ವೈ ವಿಜಯೇಂದ್ರ ಅಣ್ಣಾ ಅವರ ನಾಯಕತ್ವದಲ್ಲಿ ಪಕ್ಷ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಹಾದಿಯಲ್ಲಿ ಸಾಗುತ್ತಿದೆ. ರಾಜಕೀಯ ಪರಂಪರೆ ಮತ್ತು ಸಂಘಟನಾ ಶಕ್ತಿಯ ಸಮನ್ವಯವು ಮುಂದಿನ ಹಂತದ ರಾಜಕೀಯ ಚಟುವಟಿಕೆಗಳಿಗೆ ದಿಕ್ಕು ತೋರಿಸಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡು ಕೆಲಸ ನಡೆದಿದೆ.

ಐವತ್ತು ವರ್ಷಗಳ ರಾಜಕೀಯ ಪಯಣವು ಯಡಿಯೂರಪ್ಪನವರನ್ನು ಹೋರಾಟಗಾರ, ಸಂಘಟಕ, ಆಡಳಿತಗಾರ ಮತ್ತು ಜನನಾಯಕ ಎಂಬ ನಾಲ್ಕು ಆಯಾಮಗಳಲ್ಲಿ ಪರಿಚಯಿಸುತ್ತದೆ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅವರ ಈ ರಾಜಕೀಯ ಅಧ್ಯಾಯವು ದೀರ್ಘಕಾಲ ಚರ್ಚೆಯಾಗುವಂತಾಗಲಿ ಮತ್ತು ಸಂಭ್ರಮವಾಗಲಿ.

ಈ ಸುವರ್ಣ ಮಹೋತ್ಸವವು ಕೇವಲ ಸಂಭ್ರಮವಲ್ಲ; ಅದು ಒಂದು ಚಿಂತನೆ — ತತ್ವ, ಸಂಘಟನೆ ಮತ್ತು ಜನಸೇವೆಯ ಸಮನ್ವಯದ ಕಥೆ ಆಗಲಿ ಎಂಬುದೇ ನಮ್ಮ ಬಯಕೆ ಎಂದು ಪ್ರಖ್ಯಾತ ವಕೀಲರು ಬಿಜೆಪಿ ಮುಖಂಡರಾದ ರವಿ ಖಾನಾಪುರ ಹೇಳಿದರು

ಹೆಚ್ಚಿನ ಸುದ್ದಿ