ಯಾದಗಿರಿ : ಫೆ.೧೭:ವಿಜಯಪುರ-ಹೈದರಾಬಾದ್ ರಾಜ್ಯ ಹೆದ್ದಾರಿಯ ಯಾದಗಿರಿ ನಗರದ ಹೊರವಲಯದಲ್ಲಿರುವ ರೈಲ್ವೆ ಬ್ರಿಡ್ಜ್ ಮೇಲ್ಭಾಗದಲ್ಲಿ ಭದ್ರತಾ ತಡೆಗೋಡೆಗಳನ್ನು ನಿರ್ಮಿಸದೇ ಇರುವುದರಿಂದ ವಾಹನ ಸವಾರರು ಜೀವ ಭಯದ ನಡುವೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಅಭಿವೃದ್ಧಿಗಳ ಒಕ್ಕೂಟ ಸಂಘ ದವರು ತಿಳಿಸಿದ್ದಾರೆ.
ಇತ್ತೀಚೆಗೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ಬ್ರಿಡ್ಜ್ ಭಾಗದಲ್ಲಿ ಯಾವುದೇ ರಕ್ಷಾತ್ಮಕ ತಡೆಗೋಡೆ ಅಳವಡಿಸದಿರುವುದು ಸಂಬAಧಪಟ್ಟ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ೫೦ ಅಡಿಗಿಂತ ಹೆಚ್ಚು ಆಳವಿರುವುದರಿಂದ ಸಣ್ಣ ಪ್ರಮಾದವೂ ದೊಡ್ಡ ಅವಘಡಕ್ಕೆ ಕಾರಣವಾಗುವ ಭೀತಿ ಉಂಟಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ವಾಹನ ಸವಾರರು ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ತಕ್ಷಣವೇ ಕಬ್ಬಿಣದ ತಡೆಗೋಡೆಗಳನ್ನು ಅಳವಡಿಸಬೇಕು. ಜೊತೆಗೆ ಪಾದಚಾರಿಗಳ ಸಂಚಾರ ಸುಗಮಗೊಳಿಸಲು ಝೀಬ್ರಾ ಕ್ರಾಸ್ ಗುರುತುಗಳನ್ನು ಹಾಕುವುದು ಅನಿವಾರ್ಯವಾಗಿದೆ ಎಂದು ಒತ್ತಾಯಿಸಿದರು.
ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಒಂದು ವಾರದೊಳಗೆ ಡಬಲ್ ಕೋಟ್ ಡಾಂಬರೀಕರಣ, ತಡೆಗೋಡೆ ನಿರ್ಮಾಣ ಹಾಗೂ ಝೀಬ್ರಾ ಲೈನ್ ಗುರುತುಗಳನ್ನು ಪೂರ್ಣಗೊಳಿಸಲು ಗಡುವು ನೀಡಿದರು. ವಿಳಂಬವಾದಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ರಸ್ತೆ ತಡೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಫೀಕ್ ಪಟೇಲ್, ಮಲ್ಲೇಶ್ ಪಸಪುಲ್, ಬಸವರಾಜ್, ಪವನ್, ಸುಕ್ಕಯ್ಯ, ಮಲ್ಲಪ್ಪ ಸೇರಿದಂತೆ ಹಲವಾರು ಸ್ಥಳೀಯರು ಉಪಸ್ಥಿತರಿದ್ದರು.
