Wednesday, February 18, 2026
Homeಜಿಲ್ಲಾ ಸುದ್ದಿಗಳುಕಾಮನಕೇರಿ ಗ್ರಾಮದಲ್ಲಿ ಹೆಸ್ಕಾಂ ಸಿಬ್ಬಂದಿ 'ಅಕ್ರಮ'ಕ್ಕೆ ಸಾಥ್? – ಪ್ರಾಮಾಣಿಕ ರೈತರಿಗೆ ಸಂಕಷ್ಟ

ಕಾಮನಕೇರಿ ಗ್ರಾಮದಲ್ಲಿ ಹೆಸ್ಕಾಂ ಸಿಬ್ಬಂದಿ ‘ಅಕ್ರಮ’ಕ್ಕೆ ಸಾಥ್? – ಪ್ರಾಮಾಣಿಕ ರೈತರಿಗೆ ಸಂಕಷ್ಟ

ಬಸವನ ಬಾಗೇವಾಡಿ: ತಾಲೂಕಿನ ಕಾಮನಕೇರಿ ಗ್ರಾಮದಲ್ಲಿ ಹೆಸ್ಕಾಂ ಇಲಾಖೆಯ ಲೈನ್‌ಮನ್ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಅಕ್ರಮ ಅವ್ಯಾಹತವಾಗಿ ನಡೆಯುತ್ತಿದ್ದು, ಪ್ರಾಮಾಣಿಕ ರೈತರು ಕತ್ತಲಲ್ಲಿ ಕಣ್ಣೀರು ಹಾಕುವಂತಾಗಿದೆ.
ಕೇವಲ 6 ಅಧಿಕೃತ, 10ಕ್ಕೂ ಹೆಚ್ಚು ಅಕ್ರಮ!
ಗ್ರಾಮದ ವ್ಯಾಪ್ತಿಯ 63 ಟಿ.ಸಿ ಅಡಿಯಲ್ಲಿ ದಾಖಲೆಗಳ ಪ್ರಕಾರ ಕೇವಲ 6 ಪಂಪ್‌ಸೆಟ್‌ಗಳು ಮಾತ್ರ ಆರ್‌ಆರ್ (RR) ಸಂಖ್ಯೆ ಹೊಂದಿವೆ. ಆದರೆ, ವಾಸ್ತವದಲ್ಲಿ ಈ ಟಿ.ಸಿಯಿಂದ 10ಕ್ಕೂ ಹೆಚ್ಚು ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ವಿದ್ಯುತ್ ಉಣಬಡಿಸಲಾಗುತ್ತಿದೆ. ಅಕ್ರಮ ಸಂಪರ್ಕ ಪಡೆದವರಿಗೆ ಕಾನೂನು ಬದ್ಧವಾಗಿ ಆರ್‌ಆರ್ ನಂಬರ್ ಮಾಡಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕಾದ ಲೈನ್‌ಮನ್ ಹಾಗೂ ಎಂಜಿನಿಯರ್‌ಗಳೇ ಈ ಲೂಟಿಗೆ ರಹದಾರಿ ಮಾಡಿಕೊಡುತ್ತಿದ್ದಾರೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.
ಅಧಿಕಾರಿಗಳ ‘ಮಾಮೂಲಿ’ ವ್ಯವಹಾರ?
ಸರ್ಕಾರಕ್ಕೆ ಸಲ್ಲಬೇಕಾದ ರಾಜಸ್ವಕ್ಕೆ ಕನ್ನ ಹಾಕುತ್ತಿರುವ ಈ ಅಧಿಕಾರಿಗಳು, ಅಕ್ರಮ ಸಂಪರ್ಕದಾರರೊಂದಿಗೆ ಶಾಮೀಲಾಗಿ ನ್ಯಾಯಯುತವಾಗಿ ಸಂಪರ್ಕ ಪಡೆದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಕ್ರಮ ಲೋಡ್‌ನಿಂದಾಗಿ ಟಿ.ಸಿ ಪದೇ ಪದೇ ಕೈಕೊಡುತ್ತಿದ್ದು, ವೋಲ್ಟೇಜ್ ಸಮಸ್ಯೆಯಿಂದ ಅಧಿಕೃತ ರೈತರ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. “ನಾವು ನಿಯಮಬದ್ಧವಾಗಿ ಬಿಲ್ ಕಟ್ಟಿದರೂ ನಮಗೆ ಅನ್ಯಾಯವಾಗುತ್ತಿದೆ, ಆದರೆ ಅಕ್ರಮವಾಗಿ ಬಳಸುವವರು ಅಧಿಕಾರಿಗಳ ಕೃಪಾಕಟಾಕ್ಷದಿಂದ ರಾಜಾರೋಷವಾಗಿ ಬದುಕುತ್ತಿದ್ದಾರೆ” ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖೆಗೆ ಆಗ್ರಹ:
ಹೆಸ್ಕಾಂ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕರ್ತವ್ಯಲೋಪ ಎಸಗಿ ಸರ್ಕಾರಕ್ಕೆ ವಂಚಿಸುತ್ತಿರುವ ಲೈನ್‌ಮನ್ ಹಾಗೂ ಇಂಜಿನಿಯರ್ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಇಲಾಖೆಯ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ

ಹೆಚ್ಚಿನ ಸುದ್ದಿ