Sunday, February 15, 2026
Homeಜಿಲ್ಲಾ ಸುದ್ದಿಗಳುಕಾಂಗ್ರೆಸ್ ಸರ್ಕಾರ "ಭ್ರಷ್ಟಾಚಾರದ ಪಿತಾಮಹ": ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ “ಭ್ರಷ್ಟಾಚಾರದ ಪಿತಾಮಹ”: ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ವಾಗ್ದಾಳಿ

ವರದಿ : ಗೌತಮ್ ಲಿಂಗಸ್ಗೂರ

ಲಿಂಗಸೂಗೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಭ್ರಷ್ಟಾಚಾರದ ಪರಾಕಾಷ್ಠೆ ತಲುಪಿದ್ದು, ರಾಜ್ಯದ ಇತಿಹಾಸದಲ್ಲೇ ಇದು “ಭ್ರಷ್ಟಾಚಾರದ ಪಿತಾಮಹ” ಸರ್ಕಾರವಾಗಿ ಹೊರಹೊಮ್ಮಿದೆ ಎಂದು ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ 1000 ದಿನಗಳ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.

ಸರ್ಕಾರದ ವಿರುದ್ಧ ಅವರು ಮಂಡಿಸಿದ ಪ್ರಮುಖ ಅಂಶಗಳು ಹೀಗಿವೆ:

ಸರಣಿ ಹಗರಣಗಳ ಆರೋಪ:

ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಹಾಗೂ ವಕ್ಸ್ ಮಂಡಳಿಯ ಅಕ್ರಮ ವರ್ಗಾವಣೆಗಳು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ವಿವಿಧ ಇಲಾಖೆಗಳಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಸರ್ಕಾರ ತನಿಖೆಗೆ ಮುಂದಾಗುತ್ತಿಲ್ಲ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳಲ್ಲಿ ಅಕ್ರಮ:

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಅಂತಹ ಗ್ಯಾರಂಟಿ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸುವ ಮೂಲಕ ಬಡವರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಅಲ್ಲದೆ, ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ಮತ್ತು ಲೈಸೆನ್ಸ್ ನೀಡಲು ಭಾರೀ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪಗಳನ್ನು ಶಾಸಕರು ಉಲ್ಲೇಖಿಸಿದರು.
ಹದಗೆಟ್ಟ ಕಾನೂನು ಸುವ್ಯವಸ್ಥೆ:
ರಾಜ್ಯದಲ್ಲಿ ಕೊಲೆ, ದರೋಡೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಡ್ರಗ್ಸ್ ಮಾಫಿಯಾ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಜನಸಾಮಾನ್ಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ವಜ್ಜಲ್ ದೂರಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವೀರನಗೌಡ ಲೆಕ್ಕಿಹಾಳ, ತಾಲೂಕು ಅಧ್ಯಕ್ಷ ನಾಗಭೂಷಣ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ