ಶಿಗ್ಗಾಂವಿ:
ತಾಲೂಕಿನ ಹನುಮನಹಳ್ಳಿ ಗ್ರಾಮದ ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ ಪ್ರಕರಣ, ಘಟನೆ ನಡೆದ ಸ್ಥಳಕ್ಕೆ ತಕ್ಷಣವೇ ಪೊಲೀಸ್ ಇಲಾಖೆ ವ್ಯಾಪಕ ಕಾರ್ಯಾಚರಣೆ ಆರಂಭಿಸಿದರೂ ಆರೋಪಿಗಳು ಇನ್ನೂ ಕೈಗೆ ಸಿಕ್ಕಿಲ್ಲ.
ಡಿವೈಎಸ್‌ಪಿ ಕೆ.ವಿ. ಗುರುಶಾಂತಪ್ಪ ಅವರ ಮಾರ್ಗದರ್ಶನದಲ್ಲಿ ಸಿಪಿಐ ಹಾಗೂ ಪೊಲೀಸ್ ತಂಡ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹ ಕಾರ್ಯ ಮುಂದುವರಿಸಿದೆ.
ಪಿಐ ವಿ.ಹೆಚ್. ಹಿರೇಮಠ, ಪಿಎಸ್ಐ ವೈ.ಟಿ. ಹಿರಿಗಣ್ಣನವರ್ ಸೇರಿದಂತೆ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಸಂಗ್ರಹಿಸಿದ ನಮೂನೆಗಳನ್ನು ಪರಿಶೀಲಿಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆಯೂ ನಡೆಯುತ್ತಿದೆ. ಶ್ವಾನದಳವನ್ನು ಬಳಸಿಕೊಂಡು ಸುಳಿವು ಪತ್ತೆ ಮಾಡಲು ಪ್ರಯತ್ನಿಸಿದರೂ ನಿರ್ದಿಷ್ಟ ದಾರಿ ಸಿಗಲಿಲ್ಲ.
ಗ್ಯಾಸ್ ಕಟಿಂಗ್ ಮೂಲಕ ಎಟಿಎಂ ಸೆಟ್ರೆಸ್ ಒಡೆದು ಹಣ ದೋಚಿರುವ ಶಂಕೆ ವ್ಯಕ್ತವಾಗಿದ್ದು, ಇದೊಂದು ಪೂರ್ವ ಯೋಜಿತ ಕೃತ್ಯವಾಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳ್ಳರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಸಾರ್ವಜನಿಕರು ಸಂಶಯಾಸ್ಪದ ವ್ಯಕ್ತಿಗಳು ಅಥವಾ ವಾಹನಗಳ ಕುರಿತು ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ತ್ವರಿತವಾಗಿ ಸ್ಪಂದಿಸಿ ಗಂಭೀರ ತನಿಖೆ ಕೈಗೊಂಡಿರುವ ಶಿಗ್ಗಾಂವಿ ಪೊಲೀಸರ ಕಾರ್ಯಚಟುವಟಿಕೆ ಮೆಚ್ಚುಗೆಗೆ ಪಾತ್ರವಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತವಾಗಿದೆ.
ವರದಿ: ಸೋಮಶೇಖರ ಲಮಾಣಿ
