Monday, February 9, 2026
Homeಜಿಲ್ಲಾ ಸುದ್ದಿಗಳುನರೇಗಾ ಕೂಲಿ ಕಾರ್ಮಿಕರಿಂದ ವಿಬಿ ಜಿ ರಾಮ್ ಜಿ  ಹಿಂಪಡೆಯುವಂತೆ ಪ್ರತಿಭಟನೆ...

ನರೇಗಾ ಕೂಲಿ ಕಾರ್ಮಿಕರಿಂದ ವಿಬಿ ಜಿ ರಾಮ್ ಜಿ  ಹಿಂಪಡೆಯುವಂತೆ ಪ್ರತಿಭಟನೆ…

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ  *ಹೊಸ ಕಾಯ್ದೆ “ವಿಕಸಿತ ಭಾರತ-ಗ್ಯಾರಂಟಿ ಫಾರ  ರೋಜಗಾರ ಅಂಡ್  ಆಜೀವಿಕಾ ಮಿಶನ್ (ಗ್ರಾಮೀಣ) ವಿಬಿ ಜಿ ರಾಮ್ ಜಿ 2025” ಹಿಂಪಡೆದು  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (ಮನೇರಗಾ) ಪುನಃಸ್ಥಾಪಿಸುವಲ್ಲಿ ಕ್ರಮ ಜರುಗಿಸುವ ಕುರಿತು* ಮನವಿಯನ್ನು  ಮುಂಡಗೋಡ ನಗರದ ನಿರೀಕ್ಷಣಾ ಮಂದಿರದಿಂದ ಜಾಥಾ ಹಮ್ಮಿಕೊಳ್ಳುವುದರ ಪ್ರತಿಭಟನೆ ಹಾಗೂ ಮೆರವಣಿಗೆ, ಘೋಷಣೆ ಕೂಗುತ್ತಾ ಸಾಗಿ ಪಟ್ಟಣದ ಮಧ್ಯಭಾಗದ ಶಿವಾಜಿ ಸಕ೯ಲ್ ನಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ಮಾಡಲಾಯಿತು.

ನರೇಗಾ ಮೂಲಕ ಈ ದೇಶದಲ್ಲಿ ಬಡವರಿಗೆ, ವಲಸಿಗರಿಗೆ ವಲಸೆ ತಪ್ಪಿಸಿ ಅವರ ಜೀವನಾಧಾರವಾಗಿದೆ, ಈ ದೇಶದ 90ರಷ್ಟು ಪ್ರಗತಿ  ಏನಾದರೂ ಆಗಿದ್ದರೆ ಈ ಮನರೇಗಾ ಕಾಮಗಾರಿ ಗಳಿಂದಾಗಿ ಸಾಧ್ಯವಾಗಿದೆ. ನರೇಗಾ ಹೆಸರು ಉಳಿಸಿಕೊಳ್ಳುವುದು ನಮ್ಮೆಲ್ಲರ ಹಕ್ಕಾಗಿದೆ, ಎಂದು ಮುಂಡಗೋಡ ತಾಲ್ಲೂಕು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರುಗಳ ಮಹಾ ಒಕ್ಕೂಟದ ಅಧ್ಯಕ್ಷ ರಾದ ಧಮ೯ರಾಜ್ ನಡಗೇರ ಹೇಳಿದರು.

ಕೇಂದ್ರ ಸರ್ಕಾರ ನರೇಗಾ ಹೆಸರು ಬದಲಾಯಿಸಿ, ಮಹಾತ್ಮಾ ಗಾಂಧೀಜಿ ಯವರಿಗೆ ಅವರ ಹೆಸರಿಗೆ ಅಪಮಾನ ಮಾಡಿದೆ, ಮುಂದಿನ ದಿನಗಳಲ್ಲಿ ಇದುವರೆಗೆ ನರೇಗಾದಲ್ಲಿ ಸಿಕ್ಕ ಬಡವರ ಅಭಿವೃದ್ಧಿ ಪರ ಯೋಜನೆಗಳು ಸಿಗದೆ ಹೋಗಬಹುದು, ಈ ಯೋಜನೆ ಯಲ್ಲಿ ಜನರು ಮನೆ, ತೋಟಗಾರಿಕೆ, ಬದುನಿಮಾ೯ಣ, ಕೃಷಿಹೊಂಡ,ರಸ್ತೆ, ಪಕ್ಕಾ ಗಟಾರ, ಶಾಲಾಭಿವೃದ್ಧಿ, ಸಮುದಾಯ ಭವನ, ಶೌಚಾಲಯ ನಿರ್ಮಾಣಗಳು ಸಾಧ್ಯವಾಗಿದ್ದು,

ಈ ಹೊಸ ಕಾಯ್ದೆ ಬಡ ಕೂಲಿ ಕಾಮಿಕ೯ರ ಮೇಲೆ ಬರೆ ಎಳೆಯಲು ಹೊರಟಿದೆ, ಇದು ತಡೆಯುವುದು ನಮ್ಮೆಲ್ಲರ ಹೊಣೆ ಇದನ್ನು ಬದಲಿಸಿದೆ ಹೋದಲ್ಲಿ ಮುಂದಿನ ದಿನಗಳಲ್ಲಿ ದೇಶವ್ಯಾಪಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಬಸವರಾಜ ಸಂಗಮೇಶ್ವರ ಜಿಲ್ಲಾಧ್ಯಕ್ಷರು ಡಿಎಸ್. ಎಸ್ (ಚಂದ್ರಕಾಂತ್ ಕಾಧ್ರೊಳ್ಳಿ ಬಣ) ಹೋರಾಟದ ಕಿಚ್ಚು ಹೆಚ್ಚಿಸಿದರು.

ನಮಗೆ ಮೊದಲಿನ ಮನರೇಗಾ ಕಾಯ್ದೆ ಬೇಕು, ಬಡ ಕೂಲಿಕಾಮಿ೯ಕರಿಗೆ 125 ದಿನಗಳ ಕೂಲಿ ಬೇಡ ನಮಗೆ 200ದಿನಗಳ ಕೂಲಿ ಕೊಡಬೇಕು,  ಕೂಲಿ ದರ 500ರೂಯಿಂದ -600ರೂಪಾಯಿ ವರೆಗೆ ನೀಡಬೇಕು ಹೀಗೆ ಮಾಡುವುದರಿಂದ ಬಡ ಕೂಲಿ ಕಾಮಿಕ೯ರ ಆಥಿ೯ಕ ಸುಧಾರಣೆ ಆಗಲು ಸಾಧ್ಯ ಮತ್ತು ವಲಸೆ ಯನ್ನು ಸಂಪೂರ್ಣವಾಗಿ ತಡೆಯಲು ಅನುಕೂಲ ವಾಗುವುದೆ೦ದು ಲೊಯೋಲ ವಿಕಾಸ ಕೇಂದ್ರ ಮುಂಡಗೋಡ ದ ನಿದೇ೯ಶಕರಾದ ಫಾದರ್ ಅನಿಲ್ ಡಿಸೋಜಾ ಹಕ್ಕೊತ್ತಾಯ ಮಾಡಿದರು.

ಹಿನ್ನೆಲೆ:-
    ಎರಡು ದಶಕಗಳಿಗಿಂತ ಹೆಚ್ಚಿನ ಅವಧಿಯಿಂದ ರಾಷ್ಟ್ರದ ಗ್ರಾಮೀಣ ಭಾಗದಲ್ಲಿ ಜಾರಿಯಲ್ಲಿದ್ದ 26.57ಕೋಟಿ ಅ-ಕುಶಲಕರ್ಮಿಗಳ  ಜೀವನೋಪಾಯದ ಆಶಾಕಿರಣವಾಗಿದ್ದ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005’ (ಮನೇರಗಾ)ವನ್ನು, ತಾವು, ವಿಕಸಿತ ಭಾರತ-ಗ್ಯಾರಂಟಿ ಫಾರ  ರೋಜಗಾರ ಅಂಡ್  ಆಜೀವಿಕಾ ಮಿಶನ್ (ಗ್ರಾಮೀಣ) -ವಿಬಿ ಜಿ ರಾಮ್ ಜಿ-2025 ಯನ್ನಾಗಿ ಬದಲಾಯಿಸಿ ಜಾರಿಗೆ ತರಲು ಡಿಸೆಂಬರ್ 20,2025 ರಂದು ಸಮ್ಮತಿ ನೀಡಿರುವುದು ತಿಳಿಯಿತು.
ಡಿಸೆಂಬರ್ 21,2025 ರಿಂದ ಜಾರಿಗೆ ಬಂದಿರುವ, ಈ ಹೊಸ ಕಾಯ್ದೆ ‘ವಿಬಿ ಜಿ ರಾಮ್ ಜಿ-2025’  ಸಂವಿಧಾನದ 73ನೇ ತಿದ್ದುಪಡಿಯ ಪ್ರಕಾರ ಗ್ರಾಮ ಸಭೆ ಮತ್ತು ಗ್ರಾಮ ಪಂಚಾಯತ್‌ಗಳಿಗೆ ಇದ್ದ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡಿದೆ. ಇದರಿಂದ, ಗ್ರಾಮ ಸಭೆಗೂ, ಪ್ರಜೆಗಳ ನಿರ್ಧಾರಕ್ಕೂ ಸ್ಥಾನವೇ ಇಲ್ಲವಾಗಿ ಪಂಚಾಯತ್‌ನ ಮೂಲತತ್ವ ಹಾಗೂ ಪ್ರಜಾಪ್ರಭುತ್ವದ ಆಶಯಗಳು ಮಣ್ಣು ಪಾಲಾಗಿವೆ. ಇದರಿಂದ, ಬಹು ಮಹಾತ್ವಾಕಾಂಕ್ಷೆಯ, ಗ್ರಾಮೀಣ ಜನರ ಕೆಲಸದ ಹಕ್ಕು, ಭಾಗವಹಿಸುವಿಕೆ ಮತ್ತು ಸಮಗ್ರ ವಿಕಾಸ ದೃಷ್ಟಿಕೋನದೊಂದಿಗೆ  ದೇಶದಾದ್ಯಂತ ಜಾರಿಯಲ್ಲಿದ್ದ ‘ಮನರೇಗಾ’ 2005ರ ಬದಲಾಯಿಸಿ ‘ವಿಬಿ ಜಿ ರಾಮ್ ಜಿ’ 2025 ಜಾರಿಗೆ ತಂದಿರುವುದು, ಈ ದೇಶದ ಕೊಟ್ಯಾಂತರ ಬಡ ಜನರಿಗೆ, ಕೂಲಿಕಾರರಿಗೆ, ಜನಸಾಮಾನ್ಯರಿಗೆ  ಮಾಡಿದ ದ್ರೋಹವಾಗಿದೆ ಎಂದು ಅನಿವಾರ್ಯವಾಗಿ ಹೇಳಲೇಬೇಕಾಗಿದೆ.  
    ಎಲ್ಲಾ ಗ್ರಾಮೀಣ ಕುಟುಂಬಗಳಿಗೆ  ‘ಮನರೇಗಾ’ ಅಡಿಯಲ್ಲಿ ಒದಗಿಸಿದ  ಉದ್ಯೋಗ ಖಾತ್ರಿಯ  ಶಾಸನಬದ್ಧ ಹಕ್ಕನ್ನು ಹೊಸ ಕಾಯ್ದೆ ಮೊಟಕುಗೊಳಿಸಿದೆ. ಬೇಡಿಕೆ ಆಧಾರಿತ ಮತ್ತು ವಿಕೇಂದ್ರೀಕೃತ ‘ಮನರೇಗಾ’ದ  ಮೂಲತತ್ವವನ್ನು ಬದಲಿಸಿ,  ಕೇಂದ್ರಿಕೃತ ಹಾಗೂ ಅಯವ್ಯಯಕ್ಕೆ (ಬಜೆಟ್) ಸೀಮಿತಗೊಳಿಸಿ, ಈ ಹಿಂದಿನ ಮನರೆಗಾದ ಮೂಲ ಸ್ವರೂಪವನ್ನೇ ಬದಲಿಸಿದೆ. ಜೊತೆಗೆ, ಹೊಸ ಕಾಯ್ದೆ, ಪ್ರತಿ ರಾಜ್ಯಕ್ಕೆ ನೀಡುವ ಅನುದಾನವನ್ನು ಕೇಂದ್ರ ಸರ್ಕಾರವೇ ನಿರ್ಧರಿಸಿ, ಆ ಮೂಲಕ ಸೃಷ್ಟಿಸಬಹುದಾದ ಉದ್ಯೋಗದ ದಿನಗಳನ್ನು ಸರ್ಕಾರವೇ ನಿರ್ದೇಶಿಸುತ್ತದೆ.
    ‘ಮನರೇಗಾ’ ಅಡಿಯಲ್ಲಿ ಕೇಂದ್ರ ಸರ್ಕಾರವು ಅಕುಶಲ ಕೂಲಿಯ 100% ವೆಚ್ಚವನ್ನು ಭರಿಸುತ್ತಿತ್ತು.  ಆದರೆ, ಹೊಸ,  ವಿಬಿ-ಜಿ ರಾಮ್-ಜಿ ಕಾಯ್ದೆಯು ರಾಜ್ಯ ಸರ್ಕಾರಗಳು ಒಟ್ಟೂ  ವೆಚ್ಚದ 40% ರಷ್ಟು ಭರಿಸಬೇಕೆಂದು ಸೂಚಿಸುತ್ತದೆ. ಇದು ಎಲ್ಲಾ ರಾಜ್ಯಗಳ ಮೇಲೂ ಅದರಲ್ಲೂ ಬಡತನ ಹೆಚ್ಚಿರುವ ಮತ್ತು ಕಡಿಮೆ ಆದಾಯದ ಮೂಲಗಳನ್ನು ಹೊಂದಿರುವ, ಕರ್ನಾಟಕದಂತಹ  ರಾಜ್ಯಗಳ ಮೇಲೆ ತೀವ್ರ ಅಡ್ಡ ಪರಿಣಾಮ ಬೀರಲಿದ್ದು,  ಕೆಲಸದ ಅಗತ್ಯವಿರುವ ಪ್ರದೇಶಗಳಲ್ಲಿ ಉದ್ಯೋಗದ ಅವಕಾಶಗಳು ಕಡಿಮೆಯಾಗಲಿವೆ. ವರ್ಷದಲ್ಲಿ 60 ದಿನಗಳ ಕಾಲ, ಅಂದರೆ ಬಿತ್ತನೆ  ಮತ್ತು  ಕಟಾವು ಅವಧಿಯ ಸಮಯದಲ್ಲಿ ಕಾಮಗಾರಿಗಳನ್ನು ಈ ಖಾಯ್ದೆಯು ಸ್ಥಗಿತಗೊಳಿಸಿದೆ. ಇದರಿಂದ ಭೂ-ರಹಿತ  ಕೂಲಿಕಾರರು,  ಖಾಸಗಿ ಮಾಲಿಕರ  ಬಳಿ ಕಡಿಮೆ ಕೂಲಿಗೆ ಕೆಲಸ  ಮಾಡುವಂತೆ ಒತ್ತಾಯಿಸುತ್ತದೆ. ‘ಮನರೇಗಾ’ ನೀಡಿದ್ದ ವರ್ಷಪೂರ್ತಿ ವೇತನ  ರಕ್ಷಣೆಯನ್ನು ತೆಗೆದುಹಾಕಿದೆ. ಇದು  ಕೇಂದ್ರ ಸರಕಾರವೇ ನೇರವಾಗಿ  ಅಕುಶಲ ಕೂಲಿಕಾರರ  ಕೆಲಸದ ಹಕ್ಕಿನ ಮೇಲೆ ನಡೆಸುತ್ತಿರುವ ವ್ಯವಸ್ಥಿತ ದಾಳಿಯಾಗಿದ್ದು, ಕೂಲಿಕಾರರ ‘ಕೂಲಿಯ ದರದ ಚೌಕಾಶಿ’ ಮಾಡುವ  ಶಕ್ತಿಯನ್ನು ಕುಂದಿಸಿದೆ. ವರ್ಷಕ್ಕೆ 125 ದಿನಗಳ ಕೆಲಸ ಎಂದು ಭಾರಿ ಪ್ರಚಾರ ಮಾಡುತ್ತಿರವ ಕೇಂದ್ರ ಸರಕಾರದ ಹೊಸ ಕಾಯ್ದೆಯ ಹಿಂದಿರುವ ಕಟ್ಟು ಸತ್ಯ ಇದು.  ಮಹಾತ್ಮಾ ಗಾಂಧೀಜಿಯವರ ಹೆಸರಿಗೆ ಅಪಮಾನ ಮಾಡಿದ ಹೊಸ ಕಾಯ್ದೆ, ಮಹಾನ್ ಮಾನವತಾವಾದಿ ಅಂಬೇಡ್ಕರ್‌ರವರು ಪ್ರತಿಪಾದಿಸಿದ ಮೂಲ ತತ್ವಕ್ಕೆ ತಿಲಾಂಜಲಿ ಇಟ್ಟಿದೆ. ಅನುಷ್ಠಾನ  ಪ್ರಕ್ರಿಯೆಯಲ್ಲಿ ಇದ್ದ ಕೆಲವು ಕುಂದುಕೊರತೆಗಳ ನಡುವೆಯೂ ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಘನತೆಯ ಬದುಕಿಗೆ ಅತ್ಯಮೂಲ್ಯ ಕೊಡುಗೆ ನೀಡಿ ಪ್ರಪಂಚದಲ್ಲಿಯೇ ಅತ್ಯುತ್ತಮ  ಉದ್ಯೋಗ ಖಾತರಿ ಕಾಯ್ದೆ ಎಂದು ಹೆಸರಾಗಿದ್ದ ‘ಮನರೆಗಾ’2005ರ  ಪುನಃಸ್ಥಾಪನೆ ಅತ್ಯಂತ ಆವಶ್ಯಕವಾಗಿದ್ದು, ‘ವಿಬಿ ಜಿ ರಾಮ ಜಿ’2025ರ  ಕಾಯ್ದೆಯನ್ನು ಹಿಂಪಡೆಯಲು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು..

ಈ ದೇಶದ  ಗ್ರಾಮೀಣ ಬಡ ಕೂಲಿ ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳು ಮತ್ತು ಜೀವನೋಪಾಯದ ರಕ್ಷಣೆಗಾಗಿ  ಅತ್ಯಂತ ತುರ್ತು ಹಾಗೂ ಸಕಾಲಿಕ ಕ್ರಮವನ್ನು  ತಾವು  ಕೈಗೊಳ್ಳುವಿರಾಗಿ ಆಶಿಸುತ್ತಿದ್ದೇವೆ. ಎಂದು ಮನವಿ ಯಲ್ಲಿ ತಿಳಿಸಿರುವರು
 
ಈ ಪ್ರತಿಭಟನಾ ಮೆರವಣಿಗೆ ಮತ್ತು ಮನವಿ ಸಲ್ಲಿಸುವ ಸಂದರ್ಭದಲ್ಲಿ, ತಾಲ್ಲೂಕಾ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ, ಅಧ್ಯಕ್ಷರಾದ ಅಶೋಕ ದೈವಜ್ಞ, ಗುಲ್ಜಾರ್ ಸಂಗೂರ, ಗಣಪತಿ ದೆಸಳ್ಳಿ, ರೇಣುಕಾ ತಳವಾರ, ಮಮ್ಮದನೀಫ ಅಗಡಿ, ಮುಂಡಗೋಡ ತಾಲೂಕಾ ಚುನಾಯಿತ ಗ್ರಾಮ ಪಂಚಾಯತ ಸದಸ್ಯರುಗಳ ಮಹಾಒಕ್ಕೂಟದ ಅಧ್ಯಕ್ಷರಾದ ಧರ್ಮರಾಜ ನಡಗೇರ, ಸಂತೋಷ ಭೊಸ್ಲೆ, ಶರೀಫಸಿಂಗ್ ಶಿಗ್ಗಟ್ಟಿ, ಪುಟ್ಟಪ್ಪ ಗುಲ್ಯಾನವರ, ಪಕ್ಕಿರವ್ವ ಪಾಟೀಲ, ಯಶೋಧಾ ಪಾಟೀಲ, ಪ್ರೇಮಾ ಕೋರವರ, ಪರಶುರಾಮ ತಿಕ್ಕೋಜಿ, ಫಕ್ಕಿರೇಶ ತಾವರಗೇರಿ, ಬಸವರಾಜ ಸಂಗಮೇಶ್ವರ ಡಿಎಸ್.ಎಸ್(ಚಂದ್ರಕಾಂತ್ ಕಾದ್ರೋಳ್ಳಿ), ಸಿಸಿಎಫ್ ಲೊಯೋಲ ಜನಸ್ಫೂರ್ತಿ ಮಹಿಳಾ ಸ್ವಸಹಾಯ ಸಂಘಗಳ ಟ್ರಸ್ಟ್, ಯುವರತ್ನ ಯುವ ಒಕ್ಕೂಟ, ಮುಂಡಗೋಡ ತಾಲೂಕಾ ಭೂಹಕ್ಕುದಾರರ ಹಿತರಕ್ಷಣಾ ವೇದಿಕೆ, ಉತ್ತರಕನ್ನಡ ಜಿಲ್ಲೆಯ ಕಲ್ಪವೃಕ್ಷ ಯೂನೀಯನ್ ಮತ್ತು ಜನವೇದಿಕೆ ಪದಾಧಿಕಾರಿಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕೂಲಿ ಕಾರ್ಮಿಕರು ಹಾಜರಿದ್ದರು ಅಂದಾಜು 300 ಕ್ಕಿಂತ ಹೆಚ್ಚಿನ ಜನರು ಬಾಗವಹಿಸಿದ್ದರು.

ವರದಿಗಾರರು: ಲಕ್ಷ್ಮಣ ಮುಳೆ (ಉತ್ತರ ಕನ್ನಡ)

ಹೆಚ್ಚಿನ ಸುದ್ದಿ