Monday, February 9, 2026
Homeಜಿಲ್ಲಾ ಸುದ್ದಿಗಳುಅಪ್ರಾಪ್ತ ಬಾಲಕಿ ಅಪಹರಣ, ಲೈಂಗಿಕ ದೌರ್ಜನ್ಯ! ಯೂಟ್ಯೂಬರ್ ಗಳ ಬಂಧನ…

ಅಪ್ರಾಪ್ತ ಬಾಲಕಿ ಅಪಹರಣ, ಲೈಂಗಿಕ ದೌರ್ಜನ್ಯ! ಯೂಟ್ಯೂಬರ್ ಗಳ ಬಂಧನ…

ಮಾಗಡಿ: ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ನಸುಕಿನಲ್ಲಿ ಮನೆಗೆ ತೆರಳುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಯೂಟ್ಯೂಬ್ ನ್ಯೂಸ್ ಚಾನೆಲ್ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ನಿವಾಸಿ, ‘ಆರ್‌ಜೆ ಡಿಜಿಟಲ್ ನ್ಯೂಸ್’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ರವಿ ಜಮುನಾನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇತರೆ ಇಬ್ಬರು ಆರೋಪಿಗಳಾದ ರವಿಯ ಸ್ನೇಹಿತ ಹಾಗೂ ಮಾಗಡಿಯ ವೆಂಕಟೇಶ್ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

ಪೀಡಿತ ಬಾಲಕಿ ಹೊಸ ವರ್ಷದ ಸಂಭ್ರಮಕ್ಕಾಗಿ ತನ್ನ ಚಿಕ್ಕಮ್ಮನ ಮನೆಯಲ್ಲಿಗೆ ಕುಟುಂಬದೊಂದಿಗೆ ತೆರಳಿದ್ದಳು. ಅದೇ ಗ್ರಾಮದ ವೆಂಕಟೇಶ್‌ಗೆ ಸೇರಿದ ತೋಟದ ಮನೆಯಲ್ಲಿ ರವಿ ಹಾಗೂ ಆತನ ಸ್ನೇಹಿತರು ಹೊಸ ವರ್ಷದ ಪಾರ್ಟಿ ಆಯೋಜಿಸಿದ್ದರು. ಸಂಭ್ರಮ ಮುಗಿದ ಬಳಿಕ, ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಬಾಲಕಿ ಒಬ್ಬಳೇ ಮನೆಗೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಅದೇ ವೇಳೆ ಪಾರ್ಟಿ ಮುಗಿಸಿಕೊಂಡು ರವಿ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದರು. ಎದುರಿಗೆ ಸಿಕ್ಕ ಬಾಲಕಿಯನ್ನ ತೋಟದ ಮನೆಗೆ ಹೋಗುವ ದಾರಿ ಯಾವುದು’ ಎಂದು ಪ್ರಶ್ನಿಸಿದ್ದಾರೆ. ಪ್ರತಿಕ್ರಿಯಿಸದೆ ಮನೆ ಕಡೆ ಹೆಜ್ಜೆ ಹಾಕಿದ ಬಾಲಕಿಯನ್ನು ಹಿಂಬಾಲಿಸಿದ ಆರೋಪಿಗಳು, ಏಕಾಏಕಿ ಕಾರಿನೊಳಗೆ ಎಳೆದುಕೊಂಡಿದ್ದಾರೆ. ಮಾರ್ಗ ಮಧ್ಯೆ ರವಿಯ ಸ್ನೇಹಿತ ಕಾರಿನಿಂದ ಇಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನೊಳಗೆ ಬಾಲಕಿಗೆ ಮೈಮುಟ್ಟಿ ಅನುಚಿತವಾಗಿ ವರ್ತಿಸಿದ ರವಿ, ಪ್ರತಿರೋಧ ತೋರಿದ ಬಾಲಕಿಯನ್ನು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವಿದೆ. ಕಾರನ್ನು ಮಾಗಡಿ ಕಡೆ ಚಲಾಯಿಸಿ ಮಾರ್ಗ ಮಧ್ಯೆ ನಿಲ್ಲಿಸಿದ ವೇಳೆ, ಕಾರಿನಲ್ಲಿದ್ದ ರವಿ ಮೊಬೈಲ್ ಬಳಸಿ ಬಾಲಕಿ ತನ್ನ ಅಣ್ಣನಿಗೆ ಕರೆ ಮಾಡಿ, ಘಟನೆ ಹಾಗೂ ತಾನಿರುವ ಸ್ಥಳದ ಮಾಹಿತಿ ನೀಡಲು ಸಾಧ್ಯವಾಯಿತು.

ಇತ್ತ ಬಾಲಕಿ ಚಿಕ್ಕಮ್ಮನ ಮನೆಯಿಂದ ವಾಪಸ್ ಬರದೇ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಕುಟುಂಬದವರು, ಕೂಡಲೇ ಬಾಲಕಿ ತಿಳಿಸಿದ ಸ್ಥಳಕ್ಕೆ ತೆರಳಿ ಆಕೆಯನ್ನು ರಕ್ಷಿಸಿ, ರವಿಯನ್ನು ಹಿಡಿದಿದ್ದಾರೆ. ಈ ಕೃತ್ಯಕ್ಕೆ ವೆಂಕಟೇಶ್ ಸಹಾಯ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ರವಿ, ಆತನ ಸ್ನೇಹಿತ ಹಾಗೂ ವೆಂಕಟೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ರವಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪಾತ್ರದ ಕುರಿತು ಎಲ್ಲಾ ಆಯಾಮಗಳಿಂದ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ