ಕಾಮನಕೇರಿಯ ರೈತ ನಾಗಪ್ಪ ಬಾಗೇವಾಡಿ ಅವರ ಎತ್ತುಗಳಿಗೆ ಗ್ರಾಮಸ್ಥರಿಂದ ಭರ್ಜರಿ ಗೌರವ

ಕಾಮನಕೇರಿ, ವಿಜಯಪುರ: ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿರುವ ನಡುವೆಯೇ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕಾಮನಕೇರಿ ಗ್ರಾಮದ ರೈತ ನಾಗಪ್ಪ ಸಾಯೇಬಗೌಡ ಬಾಗೇವಾಡಿ ಅವರ ಜೋಡೆತ್ತುಗಳು ಸತತವಾಗಿ 22 ಎಕರೆ ಜಮೀನನ್ನು ಹರಗಿ ಗಮನಾರ್ಹ ಸಾಧನೆ ಮಾಡಿವೆ.
ಕೃಷಿ ಕಾರ್ಯಕ್ಕೆ ಜೋಡೆತ್ತುಗಳನ್ನು ಸಮರ್ಪಕವಾಗಿ ಸಿದ್ಧಪಡಿಸಿ, ಅವುಗಳ ಆರೈಕೆಗೆ ವಿಶೇಷ ಕಾಳಜಿ ವಹಿಸಿರುವ ರೈತ ನಾಗಪ್ಪ ಅವರ ಪರಿಶ್ರಮಕ್ಕೆ ಈ ಸಾಧನೆ ಸಾಕ್ಷಿಯಾಗಿದೆ. ದೀರ್ಘಕಾಲ ನಿರಂತರವಾಗಿ ಹೊಲದಲ್ಲಿ ದುಡಿದ ಜೋಡೆತ್ತುಗಳ ಸಾಮರ್ಥ್ಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಧನೆ ಪೂರ್ಣಗೊಂಡ ಬಳಿಕ ನಾಗಪ್ಪ ಅವರು ಜೋಡೆತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಗ್ರಾಮಸ್ಥರು ಜೋಡೆತ್ತುಗಳಿಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ಅಮರೇಶಣ್ಣ ಕಾಮನಕೇರಿ ಮಾತನಾಡಿ, “ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ನಾಡಿನ ಕೃಷಿ ಸಂಸ್ಕೃತಿ ಮತ್ತು ಜೋಡೆತ್ತುಗಳ ಮಹತ್ವವನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಸಾಧನೆಗಳು ಮಾದರಿಯಾಗಿವೆ. ಎತ್ತುಗಳನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಸಾಕಿ, ಅನ್ನದಾತನೊಂದಿಗೆ ಹೆಗಲುಕೊಟ್ಟು ದುಡಿಯುವ ಈ ಜೋಡೆತ್ತುಗಳ ಸಾಧನೆ ಶ್ಲಾಘನೀಯ. ಇದರ ಹಿಂದೆ ರೈತ ಮತ್ತು ಕೃಷಿ ಕಾರ್ಮಿಕರ ಪರಿಶ್ರಮವೂ ಮಹತ್ವದ್ದಾಗಿದೆ,” ಎಂದು ಹೇಳಿದರು.
ಟ್ರ್ಯಾಕ್ಟರ್‌ಗಳು ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆ ಹೆಚ್ಚಾದರೂ, ರೈತ ಮತ್ತು ಜೋಡೆತ್ತುಗಳ ನಡುವಿನ ಬಾಂಧವ್ಯ ಗ್ರಾಮೀಣ ಕೃಷಿಯಲ್ಲಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಕಾಮನಕೇರಿಯ ಈ ಘಟನೆ ಉತ್ತಮ ಉದಾಹರಣೆಯಾಗಿದೆ.
