Saturday, June 13, 2026
Homeಕೃಷಿಹೆಸ್ಕಾಂ ಖಾಸಗೀಕರಣ ವಿರೋಧಿಸಿ ರೈತ ಸಂಘದಿಂದ ಎಚ್ಚರಿಕೆ

ಹೆಸ್ಕಾಂ ಖಾಸಗೀಕರಣ ವಿರೋಧಿಸಿ ರೈತ ಸಂಘದಿಂದ ಎಚ್ಚರಿಕೆ


ಅಥಣಿ,: ಹೆಸ್ಕಾಂ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಗೆ, ಹಸ್ತಾಂತರಿಸುವ ಯಾವುದೇ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕ ಅಥಣಿ ತೀವ್ರವಾಗಿ ವಿರೋಧಿಸಿದೆ.

ಈ ವೇಳೆ ಮಹಾದೇವ ಮಡಿವಾಳ ಮಾತನಾಡಿ, ಹೆಸ್ಕಾಂನಂತಹ ಸಾರ್ವಜನಿಕ ವಲಯದ ಸಂಸ್ಥೆಯನ್ನು ಖಾಸಗಿಯವರಿಗೆ ವಹಿಸಿದರೆ ರೈತರು, ಸಾಮಾನ್ಯ ಗ್ರಾಹಕರು ಹಾಗೂ ನೌಕರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ರೈತರು ಮತ್ತು ಬಡ ಗ್ರಾಹಕರು ಪ್ರಸ್ತುತ ಸರ್ಕಾರದ ವಿವಿಧ ಸಬ್ಸಿಡಿ ಸೌಲಭ್ಯಗಳನ್ನು ಪಡೆಯುತ್ತಿದ್ದು, ಖಾಸಗೀಕರಣದಿಂದ ಈ ಸೌಲಭ್ಯಗಳು ಕಡಿಮೆಯಾಗುವ ಅಥವಾ ರದ್ದಾಗುವ ಸಾಧ್ಯತೆ ಇದೆ ಅಲ್ಲದೆ, ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯುತ್ ಕಂಬಗಳು ಹಾಗೂ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳಿಗೆ ಬಳಸಲು ಅವಕಾಶ ನೀಡುವುದು ಸಾರ್ವಜನಿಕ ಆಸ್ತಿಯ ದುರುಪಯೋಗಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.
ಹೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಗೂ ಕಾರ್ಮಿಕರ ಉದ್ಯೋಗ ಭದ್ರತೆಗೂ ಖಾಸಗೀಕರಣದಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ. ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ಹೆಸ್ಕಾಂ ಅನ್ನು ಖಾಸಗಿ ಕಂಪನಿಗೆ ವಹಿಸಬಾರದು. ಒಂದು ವೇಳೆ ಸರ್ಕಾರ ಈ ನಿರ್ಧಾರವನ್ನು ಜಾರಿಗೆ ತಂದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕಿರಣ ಮಿಸಾಳ, ಗ್ರಾಮ ಅಧ್ಯಕ್ಷ ರಮೇಶ್ ಕುಂಬಾರ , ಜಿ.ಗೌ.ಅಧ್ಯಕ್ಷ ಮಹಮ್ಮದ್ ಜಮಾಲ್, ಸೇರಿದಂತೆ ಹಲವು ಮುಖಂಡರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ