Friday, April 10, 2026
Homeಜಿಲ್ಲಾ ಸುದ್ದಿಗಳುಹುನಗುಂದದಲ್ಲಿ ಎಸ್‌ಡಿಎಂಸಿ ಸದಸ್ಯರಿಗೆ ಬಲವರ್ಧನಾ ತರಬೇತಿ ಕಾರ್ಯಾಗಾರ೧೨ ಶಾಲೆಗಳ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶಾಲಾಭಿವೃದ್ಧಿ ಯೋಜನೆ, ಮೇಲ್ವಿಚಾರಣೆ ಕುರಿತು...

ಹುನಗುಂದದಲ್ಲಿ ಎಸ್‌ಡಿಎಂಸಿ ಸದಸ್ಯರಿಗೆ ಬಲವರ್ಧನಾ ತರಬೇತಿ ಕಾರ್ಯಾಗಾರ೧೨ ಶಾಲೆಗಳ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶಾಲಾಭಿವೃದ್ಧಿ ಯೋಜನೆ, ಮೇಲ್ವಿಚಾರಣೆ ಕುರಿತು ಮಾರ್ಗದರ್ಶನ


ಮುಂಡಗೋಡ, ಏಪ್ರಿಲ್ 09: ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಡಗೋಡ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಮುಂಡಗೋಡ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುನಗುಂದದಲ್ಲಿ ದಿನಾಂಕ 09.04.2026 ರಂದು 12 ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಒಂದು ದಿನದ ಬಲವರ್ಧನಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಕೆಂಜಡಯ್ಯ ಹಿರೇಮಠ ವಹಿಸಿದ್ದರು. ಕಾರ್ಯಕ್ರಮವನ್ನು ಗಣ್ಯರು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶ್ರೀ ಕೆಂಜಡಯ್ಯ ಹಿರೇಮಠ ಅವರು, “ಶಾಲಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಒಂದು ಶಾಲೆ ಕ್ರಿಯಾಶೀಲವಾದರೆ ಸಮುದಾಯವೂ ಕ್ರಿಯಾಶೀಲವಾಗುತ್ತದೆ. ಹುನಗುಂದ ಶಾಲೆ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ಸಮುದಾಯದ ವಿಶ್ವಾಸ ಪಡೆದು ಮಕ್ಕಳಿಗೆ ಹೆಚ್ಚುವರಿ ಅಧ್ಯಯನ ಅವಧಿ ನಡೆಸಿರುವುದು ಮಾದರಿಯಾಗಿದೆ. ನಮ್ಮ ಊರ ಶಾಲೆ ದೇಶದಲ್ಲಿಯೇ ಹೆಸರುವಾಸಿಯಾಗಲಿ” ಎಂದು ಆಶಯ ವ್ಯಕ್ತಪಡಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಎನ್.ಡಿ. ನದಾಫ್ (ಸಿಆರ್ಪಿ ಬಾಚಣಕಿ ಕ್ಲಸ್ಟರ್) ಅವರು, ಹೊಸದಾಗಿ ಆಯ್ಕೆಯಾದ ಎಸ್‌ಡಿಎಂಸಿ ಸದಸ್ಯರಿಗೆ ತರಬೇತಿ ಕಾರ್ಯಾಗಾರವು ಸಮಿತಿಯ ಕಾರ್ಯಪಟುತೆ ಹಾಗೂ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಬಸವರಾಜ ಆಸ್ತಕಟ್ಟಿ (ಎಸ್‌ಡಿಎಂಸಿ ಅಧ್ಯಕ್ಷರು, ಸರಕಾರಿ ಪ್ರೌಢ ಶಾಲೆ ಹುನಗುಂದ) ಅವರು ಮಾತನಾಡಿ, ಶಾಲೆಗಳ ಮೂಲಸೌಕರ್ಯ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪೋಷಕರು ವಾರಕ್ಕೊಮ್ಮೆ ಶಾಲೆಗೆ ಭೇಟಿ ನೀಡಿ ಸಹಕಾರ ನೀಡಬೇಕು. ಶಾಲಾಭಿವೃದ್ಧಿಗೆ ಸಮುದಾಯದ ಪಾತ್ರ ಪ್ರಮುಖ ಎಂದು ಹೇಳಿದರು.


ಕಾರ್ಯಾಗಾರದ ಮೊದಲ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಹನುಮಂತ ತಳವಾರ (ಮುಖ್ಯೋಪಾಧ್ಯಾಯರು, ಸ.ಹಿ.ಪ್ರಾ. ಶಾಲೆ ಬಾಚಣಕಿ) ಅವರು ಎಸ್‌ಡಿಎಂಸಿ ರಚನೆ, ಮೀಸಲಾತಿ ವ್ಯವಸ್ಥೆ, 50% ಮಹಿಳಾ ಪ್ರಾತಿನಿಧ್ಯ, ಆಯ್ಕೆ ಪ್ರಕ್ರಿಯೆ ಮತ್ತು ಒಂದು ವರ್ಷದ ಶಾಲಾಭಿವೃದ್ಧಿ ಯೋಜನೆ ರೂಪಿಸುವ ಕುರಿತು ಮಾಹಿತಿ ನೀಡಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಲ್ಲಿಕಾರ್ಜುನ ಬಡೀಗೇರ ತರಬೇತಿದಾರರು (ಬಿಆರ್ಪಿ, ಮುಂಡಗೋಡ) ಅವರು ಎಸ್‌ಡಿಎಂಸಿ ಸಮಿತಿಯ ಪಾತ್ರ, ಮಕ್ಕಳ ಹಾಜರಾತಿ ಸುಧಾರಣೆ, ಸರ್ಕಾರದ ಶೈಕ್ಷಣಿಕ ಸೌಲಭ್ಯಗಳು, ಕರ್ನಾಟಕ ಪಬ್ಲಿಕ್ ಶಾಲೆಗಳ ಯೋಜನೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಪೋಷಕರ ಸಹಭಾಗಿತ್ವದ ಅಗತ್ಯತೆ ಕುರಿತು ವಿವರಿಸಿದರು. ಮಕ್ಕಳ ಶಿಕ್ಷಣದಲ್ಲಿ ಗೈರುಹಾಜರಿ ಸಮಸ್ಯೆ ನಿವಾರಿಸಲು ಎಸ್‌ಡಿಎಂಸಿ ಸಮಿತಿಯ ಮೇಲ್ವಿಚಾರಣೆ ಮಹತ್ವದಾಗಿದೆ ಎಂದು ತಿಳಿಸಿದರು.


ಕೊನೆಯ ಅವಧಿಯಲ್ಲಿ 12 ಶಾಲೆಗಳ ಎಸ್‌ಡಿಎಂಸಿ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿ ಅವರ ಸಾಧನೆಗಳು, ಸವಾಲುಗಳು ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಸದಸ್ಯರ ಸಂದೇಹಗಳಿಗೆ ಶ್ರೀ ಎನ್.ಡಿ. ನದಾಫ್ ಹಾಗೂ ಬಿಆರ್ಪಿ ಶ್ರೀ ಮಲ್ಲಿಕಾರ್ಜುನ ಬಡೀಗೇರ ಅವರು ಉತ್ತರ ನೀಡಿದರು.


ಕಾರ್ಯಾಗಾರದ ನಿರೂಪಣೆಯನ್ನು ಶ್ರೀಮತಿ ವೈಶಾಲಿ ನಾಯ್ಕ (ಪ್ರಭಾರಿ ಮುಖ್ಯೋಪಾಧ್ಯಾಯರು, ಸ.ಹಿ.ಪ್ರಾ. ಶಾಲೆ ಅರಷೀಣಗೇರಿ) ನೆರವೇರಿಸಿದರು. ಸ್ವಾಗತ ಭಾಷಣವನ್ನು ಶ್ರೀ ಎಸ್.ವಿ. ಮಾದರ (ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ. ಶಾಲೆ ಹುನಗುಂದ) ಹಾಗೂ ವಂದನಾರ್ಪಣೆಯನ್ನು ಶ್ರೀ ವಾಯ್.ಜಿ. ಹಳ್ಳಿ (ಮುಖ್ಯೋಪಾಧ್ಯಾಯರು, ಸ.ಕಿ.ಪ್ರಾ. ಶಾಲೆ ಅತ್ತಿವೇರಿ) ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಲಿಂ ಶೇಖ್ (ಸಿಆರ್ಪಿ, ಉರ್ದು ಶಾಲೆ ಮುಂಡಗೋಡ), ಎಂ.ಡಿ. ನದಾಫ್ (ಸಿಆರ್ಪಿ), ಶ್ರೀ ಸಿದ್ಧನಗೌಡ ಪಾಟೀಲ್, ಶ್ರೀ ಬಸವಣ್ಣೇಪ್ಪ ನಡಮನಿ, ಶ್ರೀ ಸಹದೇವಪ್ಪ ಆಸ್ತಕಟ್ಟಿ, ಶ್ರೀಮತಿ ಅನಸೂಯಾ ನಡಮನಿ, ಶ್ರೀ ವಸಂತ ರಾಠೋಡ (ಮುಖ್ಯೋಪಾಧ್ಯಾಯರು, ಜೇನಮುರಿ) ಸೇರಿದಂತೆ 12 ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು ಹಾಗೂ ಹಿರಿಯರು ಭಾಗವಹಿಸಿದ್ದರು.

ವರದಿಗಾರರು: ಲಕ್ಷ್ಮಣ ಮುಳೆ

ಹೆಚ್ಚಿನ ಸುದ್ದಿ