Thursday, February 12, 2026
Homeಟಾಪ್ ನ್ಯೂಸ್ಸರ್ಕಾರಿ ಕಚೇರಿಯೇ ಪಾರ್ಟಿ ಹಾಲ್: 11 ಕೇಕ್ ಕತ್ತರಿಸಿ ಸಂಭ್ರಮಿಸಿದ ನೌಕರ - ಹೈಕೋರ್ಟ್ ಆದೇಶಕ್ಕೆ...

ಸರ್ಕಾರಿ ಕಚೇರಿಯೇ ಪಾರ್ಟಿ ಹಾಲ್: 11 ಕೇಕ್ ಕತ್ತರಿಸಿ ಸಂಭ್ರಮಿಸಿದ ನೌಕರ – ಹೈಕೋರ್ಟ್ ಆದೇಶಕ್ಕೆ ಕ್ಯಾರೆ ಎನ್ನದ ಸಿಬ್ಬಂದಿ! ಕಾನೂನು ಕ್ರಮಕ್ಕೆ ಅಮರೇಶಣ್ಣ ಆಗ್ರಹ

ಬೆಂಗಳೂರು: “ಸರ್ಕಾರಿ ಕೆಲಸ ದೇವರ ಕೆಲಸ” ಎಂಬ ನಾಮಫಲಕದ ಅಡಿಯಲ್ಲಿ ಸಾರ್ವಜನಿಕರ ಸೇವೆಯಲ್ಲಿ ತೊಡಗಬೇಕಾದ ಕಚೇರಿಯೊಂದು ಈಗ ಬರ್ತ್‌ಡೇ ಪಾರ್ಟಿ ಹಾಲ್ ಆಗಿ ಬದಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ನೌಕರರೊಬ್ಬರು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೆಚ್.ಆರ್. ಅನಿಲ್ ಕುಮಾರ್ (ಆರ್.ಹೆಚ್.ಎ) ಎಂಬುವವರೇ ಈ ವಿವಾದದ ಕೇಂದ್ರಬಿಂದು. ಕಚೇರಿ ಅವಧಿಯಲ್ಲೇ ತಮ್ಮ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಸೇರಿ ಒಂದಲ್ಲ, ಎರಡಲ್ಲ ಬರೋಬ್ಬರಿ 11 ಕೇಕ್ ಕತ್ತರಿಸುವ ಮೂಲಕ ಅನಿಲ್ ಕುಮಾರ್ ಅದ್ದೂರಿ ಪಾರ್ಟಿ ಮಾಡಿದ್ದಾರೆ.
ನ್ಯಾಯಾಲಯದ ಆದೇಶ ಉಲ್ಲಂಘನೆ:
ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಖಾಸಗಿ ಸಂಭ್ರಮಾಚರಣೆ ಅಥವಾ ಹುಟ್ಟುಹಬ್ಬದ ಪಾರ್ಟಿಗಳನ್ನು ಮಾಡುವಂತಿಲ್ಲ ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಹೀಗಿದ್ದರೂ, ಹಿರಿಯ ಅಧಿಕಾರಿಗಳ ಕಣ್ಣೆದುರೇ ಈ ರೀತಿ ಸಂಭ್ರಮಾಚರಣೆ ನಡೆದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸಾರ್ವಜನಿಕರ ಆಕ್ರೋಶ:
ದೂರದ ಊರುಗಳಿಂದ ತಮ್ಮ ಕೆಲಸಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರು ಗಂಟೆಗಟ್ಟಲೆ ಕಾಯುತ್ತಿದ್ದರೂ, ಈ ನೌಕರರು ಮಾತ್ರ ಪಾರ್ಟಿ ಮೂಡ್‌ನಲ್ಲಿದ್ದರು ಎನ್ನಲಾಗಿದೆ. ಸಾರ್ವಜನಿಕರ ಕೆಲಸಗಳಿಗೆ ಸರಿಯಾಗಿ ಸ್ಪಂದಿಸದೆ, ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿರುವ ಅನಿಲ್ ಕುಮಾರ್ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಸ್ತುಕ್ರಮಕ್ಕೆ ಆಗ್ರಹ:
“ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಕಚೇರಿಯನ್ನು ವೈಯಕ್ತಿಕ ಪಾರ್ಟಿಗಳಿಗೆ ಬಳಸುವುದು ಅಕ್ಷಮ್ಯ ಅಪರಾಧ. ಕೂಡಲೇ ಹೆಚ್.ಆರ್. ಅನಿಲ್ ಕುಮಾರ್ ಅವರನ್ನು ಅಮಾನತು ಮಾಡಬೇಕು ಮತ್ತು ಈ ಪಾರ್ಟಿಯಲ್ಲಿ ಭಾಗಿಯಾದ ಇತರೆ ಅಧಿಕಾರಿಗಳ ವಿರುದ್ಧವೂ ಕಠಿಣ ಶಿಸ್ತು ಕ್ರಮ ಜರುಗಿಸಬೇಕು” ಎಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಘಟನೆಯು ಸರ್ಕಾರಿ ಕಚೇರಿಗಳಲ್ಲಿನ ಶಿಸ್ತಿನ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ

ಹೆಚ್ಚಿನ ಸುದ್ದಿ