: ಮುಧೋಳದಲ್ಲಿ ಗನ್‌ಮ್ಯಾನ್ ಮದುವೆಗೆ ಹಾಜರಾಗಿ ಶುಭ ಹಾರೈಸಿದ ಥಾವರ್ ಚಂದ್ ಗೆಹ್ಲೋಟ್
ಮುಧೋಳ: “ಎಲ್ಲರೂ ಸಮಾನರು” ಎಂಬ ಮೌಲ್ಯಕ್ಕೆ ಅರ್ಥಪೂರ್ಣ ಉದಾಹರಣೆ ನೀಡಿದ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಸೋಮವಾರ ಮುಧೋಳ ಪಟ್ಟಣದಲ್ಲಿ ನಡೆದ ತಮ್ಮ ಸಿಬ್ಬಂದಿಯೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.
ತಮ್ಮೊಂದಿಗೆ ಪ್ರತಿದಿನ ಕರ್ತವ್ಯ ನಿರ್ವಹಿಸುವ ಸಾಮಾನ್ಯ ಕಾನ್ಸ್‌ಟೇಬಲ್ (ಗನ್‌ಮ್ಯಾನ್) ಅವರ ವಿವಾಹ ಮಹೋತ್ಸವಕ್ಕೆ ಬೆಂಗಳೂರಿನಿಂದ ಆಗಮಿಸಿದ ರಾಜ್ಯಪಾಲರು, ನವಜೋಡಿಗಳಿಗೆ ಶುಭ ಹಾರೈಸಿದರು.
ಸಾಂವಿಧಾನಿಕವಾಗಿ ಅತ್ಯುನ್ನತ ಹುದ್ದೆಯಲ್ಲಿದ್ದರೂ, ಪ್ರೋಟೋಕಾಲ್ ಪಕ್ಕಕ್ಕಿಟ್ಟು ಸಾಮಾನ್ಯರಂತೆ ಮದುವೆ ಮನೆಗೆ ಭೇಟಿ ನೀಡಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಸಮಾನತೆಯ ಸಂದೇಶ:
ಬೆಂಗಳೂರಿನ ರಾಜಭವನದಿಂದ ಮುಧೋಳದಂತಹ ಸಣ್ಣ ಪಟ್ಟಣಕ್ಕೆ ಬಂದು, ಸಿಬ್ಬಂದಿಯೊಬ್ಬರ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶೇಷ ಮೈಲಿಗಲ್ಲು. ಅಧಿಕಾರ ಮತ್ತು ಅಂತಸ್ತಿನ ನಡುವೆಯೂ ಮಾನವೀಯ ಸಂಬಂಧಗಳಿಗೆ ಬೆಲೆ ನೀಡುವ ಅವರ ನಡೆ ಸಮಾಜಕ್ಕೆ ಒಂದು ಮಹತ್ತರ ಸಂದೇಶ ನೀಡಿದೆ.
ಸ್ಥಳೀಯರಿಂದ ಹೃತೂರ್ವಕ ಸ್ವಾಗತ:
ರಾಜ್ಯಪಾಲರ ಈ ಭೇಟಿಯಿಂದ ಮುಧೋಳ ಜನತೆ ಹರ್ಷಗೊಂಡಿದ್ದು, ಸರಳತೆಯ ಪ್ರತಿರೂಪವಾದ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ನಮ್ಮ ಪಟ್ಟಣಕ್ಕೆ ರಾಜ್ಯಪಾಲರು ಆಗಮಿಸಿ ಸಾಮಾನ್ಯ ಸಿಬ್ಬಂದಿಯ ಮದುವೆಯಲ್ಲಿ ಪಾಲ್ಗೊಂಡಿದ್ದು ನಮಗೆ ಹೆಮ್ಮೆಯ ವಿಷಯ” ಎಂದು ಸ್ಥಳೀಯರು ಸಂಭ್ರಮ ಹಂಚಿಕೊಂಡಿದ್ದಾರೆ.
ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುವ ಇಂತಹ ಉದಾತ್ತ ನಡೆಗಳು ಇತರ ಆಡಳಿತಗಾರರಿಗೂ ಮಾದರಿಯಾಗಿವೆ.
