ಲಿಂಗಸುಗೂರು: ಪಟ್ಟಣದ ಶಾಸಕರ ಸರಕಾರಿ ಮಾದರಿಯ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಸಮಗ್ರ ಅಭಿವೃದ್ಧಿ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಎಸ್ಡಿಎಂಸಿ ಯನ್ನು ಇತ್ತೀಚೆಗೆ ರಚಿಸಲಾಯಿತು.
ಶಿಕ್ಷಣ ಹಕ್ಕು ಕಾಯ್ದೆ–2009ರ ನಿಯಮಾನುಸಾರ ಪೋಷಕರ ಸಭೆಯನ್ನು ನಡೆಸಿ, ಪಾರದರ್ಶಕವಾಗಿ ಸಮಿತಿ ರಚನೆ ಮಾಡಲಾಗಿದ್ದು, ಒಟ್ಟು 18 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸಮಿತಿಯಲ್ಲಿ ಮಹಿಳೆಯರಿಗೆ ಹಾಗೂ ಎಸ್ಸಿ/ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರತಿನಿಧಿತ್ವ ನೀಡಲಾಗಿದೆ.
ಪೋಷಕ ಸದಸ್ಯರೊಳಗಿಂದಲೇ ರಮೇಶ್ ತಂದೆ ಕನಕಪ್ಪ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶ್ರೀಮತಿ ಬಿಬಿ ಆಶಾ ಗಂಡ: ಆದಮ್ ಪಟೇಲ್
ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ಕಾಮಣ್ಣ, ಶಿವಪ್ಪ, ಲಕ್ಷ್ಮಿ, ಲಲಿತಾ, ಜ್ಯೋತಿ, ಶಾರದಾ, ಬಾಬು ನಾಯಕ, ರೇಣುಕಮ್ಮ, ನುಜ್ಜತ್, ರಾಜಮಹ್ಮದ್, ರಂಜಾನ ಸಾಬ್, ಬಸವರಾಜ, ಆದಯ್ಯ, ಗೌತಮ್ ಕುಮಾರ, ಸೌಮ್ಯಶ್ರೀ ಹಾಗೂ ಸಾವಿತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಶಾಲಾ ಸುದಾರಣಾ ಸಮಿತಿಯ ಸದಸ್ಯರನ್ನಾಗಿಯೂ ಅವರು ಕಾರ್ಯನಿರ್ವಹಿಸಲಿದ್ದಾರೆ. ಮುಖ್ಯಶಿಕ್ಷಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶಾಲೆಯ ಶೈಕ್ಷಣಿಕ ಪ್ರಗತಿ, ಮೂಲಸೌಕರ್ಯ ಅಭಿವೃದ್ಧಿ, ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೇಲ್ವಿಚಾರಣೆ, ಮಕ್ಕಳ ಹಾಜರಾತಿ ಹಾಗೂ ಸರ್ಕಾರದ ಅನುದಾನಗಳ ಸರಿಯಾದ ಬಳಕೆಗೆ ಹೆಚ್ಚಿನ ಗಮನ ಹರಿಸುವುದಾಗಿ ಸಮಿತಿ ನಿರ್ಧರಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಶಿಕ್ಷಕರಾದ ಸುಭಾಸ್, “ಎಸ್ಡಿಎಂಸಿ ಸಹಕಾರದಿಂದ ಶಾಲೆಯನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ” ಎಂದು ತಿಳಿಸಿದರು. ಪೋಷಕರು ಹಾಗೂ ಸ್ಥಳೀಯ ಮುಖಂಡರು ಸಮಿತಿಯ ಕಾರ್ಯಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
