ಶಿಗ್ಗಾಂವ: ವಿದ್ಯಾರ್ಥಿ ಜೀವನ ಎಂಬುದು ಬಂಗಾರದಂತದ್ದು. ಪದವಿ ಶಿಕ್ಷಣದ ನಂತರ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು, ಎಂದು ಡಾ. ನಾಗರಾಜ್ ದ್ಯಾಮನಕೊಪ್ಪ ಅವರು ಕರೆ ನೀಡಿದರು.
ಸ್ಥಳೀಯ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜೂನ್ 16ರಂದು ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ಕಾಲೇಜು ಒಕ್ಕೂಟ, ವಿವಿಧ ಸಂಘಗಳ ಹಾಗೂ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ.
ಯುವಕರು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಪರಸ್ಪರ ಬಾಂಧವ್ಯದ ಬೆಸುಗೆಯನ್ನು ಬೆಸೆಯುವ ಮನೋಭಾವ ಹೊಂದಿರಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಕ್ರೀಡಾಪಟುಗಳಿಗೆ ‘ಕ್ರೀಡಾ ಸಿರಿ’ ಪ್ರಶಸ್ತಿ ಸೇರಿದಂತೆ ವಿವಿಧ ಸಂಘಗಳ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ವೈ. ತೊಂಡಿಹಾಳ್ ಅವರು 2025-26ನೇ ಸಾಲಿನ ವರದಿ ಮಂಡಿಸಿ, ಕಾಲೇಜು ಸಾಧಿಸಿದ ಪ್ರಗತಿ ಮತ್ತು ಸಾಧನೆಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜ. ರೆ. ಶಿ. ಪ್ರತಿಷ್ಠಾನದ ಆಡಳಿತಾಧಿಕಾರಿ ಲಿಂಗಯ್ಯ ಎ. ಹಿರೇಮಠ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಆರ್.ಜೆ.ವಿ. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್. ಎಸ್. ಶಿವಣ್ಣವರ, ಐ.ಕ್ಯೂ.ಎ.ಸಿ. ಸಂಯೋಜಕರು ಹಾಗೂ ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷರಾದ ಡಾ. ಎಚ್. ಕೆ. ವಿನಯ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಆರ್. ಸಿ. ದಾದುಗೌಡರ ಸೇರಿದಂತೆ ಕಾಲೇಜಿನ ಸರ್ವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಸಮ್ಮ ಸತ್ಯಪ್ಪನವರ್ ಮತ್ತು ವೀರೇಶಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರೂ, ಅಂಜಲಿ ಡವಗಿ ವಂದನಾರ್ಪಣೆ ಮಾಡಿದರು.
