
ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಯುವ ಕಾರ್ಯದರ್ಶಿ ಬಸವರಾಜ ಭೀಮರಾಣಿ ಅವರು ಮಾತನಾಡಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಮಾನ್ಯ ಸಾರಿಗೆ ಸಚಿವರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ “ಕಿತ್ತೂರು ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ” ಎಂದು ಶೀಘ್ರವಾಗಿ ಮರುನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಈ ಕುರಿತು ಸಾರಿಗೆ ಸಂಸ್ಥೆಯ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಆದರೆ, ಭರವಸೆ ನೀಡಿ ಹಲವು ತಿಂಗಳು ಕಳೆದರೂ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಹೇಳಿದರು.
ರಾಣಿ ಚನ್ನಮ್ಮ ವಭಾರತ ಸೇನೆ ರಾಜ್ಯ ಸಂಚಾಲಕರಾದ ಜಗದೀಶ ಕಡೋಲಿ ಅವರು ಮಾತನಾಡಿ ನಮ್ಮ ಸೇನೆ ವತಿಯಿಂದ ಈ ಬೇಡಿಕೆಗಾಗಿ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಮುಂಬರುವ ಮೇ 4 ರಂದು ಕಿತ್ತೂರಿನಲ್ಲಿ ನೂತನ ಬಸ್ ಡಿಪೋ ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಜನಪ್ರತಿನಿಧಿಗಳು ಹಾಗೂ ಸಚಿವರು ತಕ್ಷಣ ಗಮನಹರಿಸಿ, ಮೇ 1 ರ ಒಳಗಾಗಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕು. ಮೇ 4 ರಂದು ಡಿಪೋ ಉದ್ಘಾಟನೆಗೂ ಮುನ್ನ ಸಂಸ್ಥೆಯ ಮರುನಾಮಕರಣವನ್ನು ಅಧಿಕೃತವಾಗಿ ಜಾರಿಗೊಳಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಒಂದು ವೇಳೆ ವಿಳಂಬ ಧೋರಣೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
