ಪರೋಪಕಾರಾಯ ಫಲಂತಿ ವೃಕ್ಷಃ, ಪರೋಪಕಾರಾಯ ವಹಂತಿ ಸದ್ಯಃ ಪರೋಪಕಾರಾಯದುಹಂತಿಗಾದಃ, ಪರೋಪಕಾರಾರ್ಥಮಿದಂ ಶರೀರಮ್ ||
ಭಗವಂತನು ಮನುಷ್ಯನಿಗೆ ಬದುಕನ್ನು ನೀಡಿದ್ದಾನೆ. ಅದರ ಸಾರ್ಥಕತೆ ಮಾಡಿಕೊಳ್ಳಬೇಕು. ಬದುಕಿರುವರೆಗೂ ತನ್ನ ಸುತ್ತ-ಮುತ್ತ ಸುಗಂಧ ಹರಡಬೇಕು. ಪರಹಿತವ, ಪರೋಪಕಾರವೆಂಬ ಸದ್ಭಾವದಿಂದ ಬಾಳಿ ಬದುಕಬೇಕು, ಶರಣರು, ಸಂತರು, ಮಹಾತ್ಮರು ತಮ್ಮಜೀವನದುದಕ್ಕೂ ಪರಹಿತಕ್ಕಾಗಿಯೇ ಬದುಕಿ ಸಂತೋಷ ಪಟ್ಟಿದ್ದಾರೆ.ದೇವರು ಕರುಣಿಸಿರುವ ತನು, ಮನ, ಬುದ್ದಿಯನ್ನು ಬಳಸಿಕೊಂಡು ಸತ್ಕಾರ್ಯ ಮಾಡಿ ಸಂತೋಷ ಪಡಬೇಕು. ಹಸಿದವರಿಗೆ ಅನ್ನ, ಒಂದಿಷ್ಟು ಸವಿ ಮಾತು ಸಾಕು. ನೆರೆ-ಹೊರೆಯವರ ಮನಸ್ಸನ್ನು ಹೂವಿನಂತೆ ಅರಳಿಸಿ ನಮ್ಮ ಸುತ್ತಮುತ್ತ ಸ್ವರ್ಗವನ್ನು ನಿರ್ಮಾಣ ಮಾಡಬಹುದು. ಆದರೆ, ಸ್ವಾರ್ಥಭಾವದಿಂದ ಬದುಕುತ್ತಿರುವ ಮನುಷ್ಯನು ತಾನು ಗಳಿಸಿರುವ ಸಂಪತ್ತನ್ನು, ದವಸ-ಧಾನ್ಯಗಳನ್ನು ತಾನೊಬ್ಬನೇ ಅನುಭವಿಸುತ್ತಿದ್ದಾನೆ. ಪರಹಿತ ಪರೋಪಕಾರಕ್ಕಾಗಿ ಬಳಸಬೇಕೆಂಬುದನ್ನು ಮರೆತು ವ್ಯರ್ಥ ಬದುಕು ಸಾಗಿಸುತ್ತಿದ್ದಾನೆ. ಪರೋಪಕಾರಕ್ಕಾಗಿ ಮರಗಳು ಹಣ್ಣು ಕೊಡುತ್ತವೆ, ಪರೋಪಕಾರಕ್ಕಾಗಿ ನದಿಗಳು ಹರಿಯುತ್ತವೆ, ಪರರ ಉಪಕಾರಕ್ಕಾಗಿ ಹಸುಗಳು ಹಾಲು ಕೊಡುತ್ತವೆ. ಅಂತೆಯೇ ಶರೀರವು ಪರೋಪಕಾರಕ್ಕಾಗಿಯೇ ಇರುವುದು.
