ಲಿಂಗಸುಗೂರು, ಏ.22: ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಲಿಂಗಸುಗೂರು ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಅಧಿಕ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟೌನ್ ಪ್ಲಾನಿಂಗ್ ಅಧಿಕಾರಿ ಶರಣಪ್ಪ ಅವರನ್ನು ಸರ್ಕಾರ ಅಮಾನತು ಮಾಡಿ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ನಅಇ 82 ನಯೋಸೇ 2026(ಇ) ದಿನಾಂಕ 22.04.2026ರಂತೆ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯರು/ಸಹಾಯಕ ನಿರ್ದೇಶಕರಾದ ಶರಣಪ್ಪ ಅವರು ಲಿಂಗಸುಗೂರು ಯೋಜನಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಇಲಾಖಾ ವಿಚಾರಣೆ ಹಾಗೂ ಕ್ರಿಮಿನಲ್ ಪ್ರಕರಣ ಬಾಕಿ ಇರಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಡಿ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಸದರಿ ಅಧಿಕಾರಿಯ ಲೀನ್ ಅನ್ನು ಬೆಂಗಳೂರು ನಗರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯಕ್ಕೆ ವರ್ಗಾಯಿಸಲಾಗಿದೆ. ಅಲ್ಲದೆ, ಅವರು ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರಿಯ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡಲು ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದಕ್ಕೂ ಮೊದಲು, ಲಿಂಗಸುಗೂರು ಪಟ್ಟಣದ ಟೌನ್ ಪ್ಲಾನಿಂಗ್ ಕಚೇರಿಯಲ್ಲಿ ಲಂಚ ಬೇಡಿಕೆ ಇಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ 4 ಎಕರೆ ಜಮೀನಿನ ಲೇಔಟ್ ನಕ್ಷೆ ಮಾಡಿಕೊಡಲು ರೂ.3,60,000 ಬೇಡಿಕೆ ಇಟ್ಟಿರುವುದಾಗಿ ಆರೋಪ ಕೇಳಿಬಂದಿತ್ತು. ಅಲ್ಲದೇ, “ಮೇಲಧಿಕಾರಿಗಳಿಗೆ ಸಹ ಪಾಲು ಕೊಡಬೇಕಾಗಿದೆ” ಎಂಬ ಮಾತು ಕೂಡ ವಿಡಿಯೋದಲ್ಲಿ ಕೇಳಿಬಂದಿದೆ ಎನ್ನಲಾಗಿದೆ.
ಲೇಔಟ್ ಮ್ಯಾಪ್ ಮಾಡಿಸಿಕೊಳ್ಳಲು ತೆರಳಿದ ವ್ಯಕ್ತಿಯೇ ಈ ವಿಡಿಯೋವನ್ನು ಚಿತ್ರೀಕರಿಸಿ ಸಾರ್ವಜನಿಕ ವಲಯಕ್ಕೆ ಹರಿಬಿಟ್ಟಿದ್ದು, ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಪ್ರಕರಣ ಗಂಭೀರತೆ ಪರಿಗಣಿಸಿದ ನಗರಾಭಿವೃದ್ಧಿ ಇಲಾಖೆ ತಕ್ಷಣ ಕ್ರಮ ಕೈಗೊಂಡು ಅಧಿಕಾರಿಯನ್ನು ಅಮಾನತು ಮಾಡಿದೆ.
ಭ್ರಷ್ಟಾಚಾರದ ವಿರುದ್ಧ ಸರ್ಕಾರ ಕಠಿಣ ನಿಲುವು ತಾಳಿದ್ದು, ಆರೋಪ ಸಾಬೀತಾದಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
