ಲಿಂಗಸಗೂರು:
ಬೇಸಿಗೆಯ ತೀವ್ರತೆಯಿಂದಾಗಿ ಪಟ್ಟಣದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಅಭಾವ ಹಾಗೂ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಶಾಸಕ ಮಾನಪ್ಪ ವಜ್ಜಲ್ ಅವರ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳೊಂದಿಗೆ ತುರ್ತು ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಸಭೆಯ ಪ್ರಮುಖ ನಿರ್ಧಾರಗಳು ಮತ್ತು ಮುಖ್ಯಾಂಶಗಳು:
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಪಟ್ಟಣದ ಪ್ರತಿ ವಾರ್ಡ್‌ಗಳಲ್ಲಿ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಮತ್ತು ಕೆಟ್ಟು ನಿಂತಿರುವ ಬೋರ್‌ವೆಲ್‌ಗಳನ್ನು ಯುದ್ಧೋಪಾದಿಯಲ್ಲಿ ದುರಸ್ತಿಗೊಳಿಸಲು ನಿರ್ದೇಶನ ನೀಡಲಾಯಿತು.
ಅಧಿಕಾರಿಗಳಿಗೆ ಎಚ್ಚರಿಕೆ: ಒಂದು ವೇಳೆ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಸಕರು ಕಠಿಣ ಎಚ್ಚರಿಕೆ ನೀಡಿದರು.
ಕಲುಷಿತ ನೀರು ಪೂರೈಕೆ ತಡೆ: ಸಾರ್ವಜನಿಕರು ಕಲುಷಿತ ನೀರಿನ ಬಗ್ಗೆ ದೂರು ನೀಡುತ್ತಿದ್ದು, ಜನರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವುದು ಪುರಸಭೆಯ ಆದ್ಯ ಕರ್ತವ್ಯ ಎಂದು ಶಾಸಕರು ತಿಳಿಸಿದರು.
ನೈರ್ಮಲ್ಯ ಮತ್ತು ಸೌಲಭ್ಯಗಳು: ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕ ಶೌಚಾಲಯಗಳ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಪಟ್ಟಣದ ಉದ್ಯಾನವನಗಳಿಗೆ ಅಧಿಕೃತ ನಾಮಫಲಕಗಳನ್ನು ಅಳವಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದವರು:
ಈ ಮಹತ್ವದ ಸಭೆಯಲ್ಲಿ ಶಾಸಕರಾದ ಶ್ರೀ ಮಾನಪ್ಪ ಡಿ. ವಜ್ಜಲ್, ಸಹಾಯಕ ಆಯುಕ್ತರಾದ ಶ್ರೀ ಬಸವಣ್ಣೆಪ್ಪ ಕಲ್ಲೇಶೆಟ್ಟಿ, ಪುರಸಭೆ ಮುಖ್ಯ ಅಧಿಕಾರಿಗಳಾದ ಶ್ರೀ ನಟರಾಜ ಸೇರಿದಂತೆ ವಿವಿಧ ಇಲಾಖೆಯ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ: ಸೋಮಶೇಖರ ನಾಯಕ್
