Sunday, June 21, 2026
Homeಜಿಲ್ಲಾ ಸುದ್ದಿಗಳುಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಲು ಅಭಿಮಾನಿಗಳ ಆಗ್ರಹ: ಅಭಿವೃದ್ಧಿಯ ಹರಿಕಾರನಿಗೆ ಸಿಗಲಿ ಮನ್ನಣೆ

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಲು ಅಭಿಮಾನಿಗಳ ಆಗ್ರಹ: ಅಭಿವೃದ್ಧಿಯ ಹರಿಕಾರನಿಗೆ ಸಿಗಲಿ ಮನ್ನಣೆ

ಅಥಣಿ: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಶಾಸಕ ಲಕ್ಷ್ಮಣ ಸವದಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಈ ನಡುವೆ, ಅವರ ಕಟ್ಟಾ ಅಭಿಮಾನಿ ರಾಮನಗೌಡ ಪಾಟೀಲ ಅವರು, ತಮ್ಮ ನಾಯಕನಿಗೆ ಸಚಿವ ಸ್ಥಾನ ದೊರೆಯುವವರೆಗೆ ತಲೆಗೆ ಕಟ್ಟಿರುವ ಟವಲ್‌ನ್ನು ಬಿಚ್ಚುವುದಿಲ್ಲ ಎಂಬ ವಿಶಿಷ್ಟ ಹರಕೆ ಹೊತ್ತು ಗಮನ ಸೆಳೆದಿದ್ದಾರೆ.

ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದಲ್ಲಿ ಕೈಗೊಂಡಿರುವ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳು ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿವೆ. ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ, ರೈತರ ಪರ ಹೋರಾಟ, ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಸೇರಿದಂತೆ ಹಲವು ಕಾರ್ಯಗಳ ಮೂಲಕ ಅವರು ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿದ್ದಲ್ಲದೆ, ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಅಭ್ಯರ್ಥಿಗಳ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅಭಿಮಾನಿ ರಾಮನಗೌಡ ಪಾಟೀಲ, “ಲಕ್ಷ್ಮಣ ಸವದಿ ಅವರು ತಮ್ಮ ರಾಜಕೀಯ ಅನುಭವ, ಆಡಳಿತ ಕೌಶಲ್ಯ ಹಾಗೂ ಅಭಿವೃದ್ಧಿ ಚಿಂತನೆಯ ಮೂಲಕ ಅಥಣಿ ಕ್ಷೇತ್ರವನ್ನು ಮಾದರಿ ತಾಲೂಕನ್ನಾಗಿ ರೂಪಿಸುತ್ತಿದ್ದಾರೆ. ಇಂತಹ ಸಮರ್ಥ ಹಾಗೂ ಅನುಭವಿ ನಾಯಕನಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು,” ಎಂದು ಒತ್ತಾಯಿಸಿದರು.

“ನಮ್ಮ ನಾಯಕನಿಗೆ ನ್ಯಾಯ ಸಿಗುವವರೆಗೆ ನಾನು ತಲೆಯ ಮೇಲಿರುವ ಟವಲ್‌ನ್ನು ಬಿಚ್ಚುವುದಿಲ್ಲ. ಸಚಿವ ಸ್ಥಾನ ದೊರೆಯುವವರೆಗೆ ನನ್ನ ಹರಕೆ ಮುಂದುವರಿಯಲಿದೆ,” ಎಂದು ಅವರು ತಿಳಿಸಿದರು.

ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಮತ್ತಷ್ಟು ಪ್ರಾತಿನಿಧ್ಯ ಸಿಗಲಿದ್ದು, ಪಕ್ಷ ಸಂಘಟನೆಗೂ ಬಲ ದೊರೆಯಲಿದೆ ಎಂಬುದು ಅವರ ಬೆಂಬಲಿಗರ ಅಭಿಪ್ರಾಯವಾಗಿದೆ.

ಹೆಚ್ಚಿನ ಸುದ್ದಿ