ಹಳಿಯಾಳ: ಕೈದಿಯೊಬ್ಬರಿಗೆ ಸರ್ಕಾರದಿಂದ ಮಂಜೂರಾಗಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹಳಿಯಾಳ ಸಬ್ ಜೈಲಿನ ಜೈಲರ್ ಕಲ್ಲಪ್ಪ ಗಸ್ತಿ ಅವರು ಕಾರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಘಟನೆಯ ವಿವರ:
ಹಳಿಯಾಳ ಉಪ ಕಾರಾಗೃಹದಲ್ಲಿ ಕೆಲಸ ಮಾಡಿದ್ದ ಕೈದಿ ರಾಜಕುಮಾರ್ ಅವರಿಗೆ ಸರ್ಕಾರದಿಂದ 1.75 ಲಕ್ಷ ರೂಪಾಯಿ ಹಣ ಮಂಜೂರಾಗಿತ್ತು. ಈ ಮೊತ್ತವನ್ನು ಕೈದಿಗೆ ಹಸ್ತಾಂತರಿಸಲು ಜೈಲರ್ ಕಲ್ಲಪ್ಪ ಗಸ್ತಿ ಅವರು 60 ಸಾವಿರ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಪೈಕಿ ಈಗಾಗಲೇ 10 ಸಾವಿರ ರೂಪಾಯಿಗಳನ್ನು ಫೋನ್ ಪೇ (PhonePe) ಮೂಲಕ ಮುಂಗಡವಾಗಿ ಪಡೆದುಕೊಂಡಿದ್ದರು.
ಲೋಕಾಯುಕ್ತ ದಾಳಿ:
ಲಂಚದ ಬೇಡಿಕೆಯಿಂದ ಬೇಸತ್ತ ರಾಜಕುಮಾರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರವಾರ ಲೋಕಾಯುಕ್ತ ಡಿ.ಎಸ್ಪಿ ಧನ್ಯಾ ನಾಯಕ್ ಹಾಗೂ ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ತಂಡ ಹಳಿಯಾಳದಲ್ಲಿ ದಾಳಿ ನಡೆಸಿದೆ. ದಾಳಿಯ ವೇಳೆ ಜೈಲರ್ ಕಲ್ಲಪ್ಪ ಗಸ್ತಿ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ
