ಭಾರತ ಸ್ವತಂತ್ರ ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಸರಕಾರವನ್ನು ಅಸ್ತಿತ್ವಕ್ಕೆ ತರಲಾಯಿತು!
ಈ ಪ್ರಕಾರ ಸಂವಿಧಾನದ ಅನುಚ್ಛೇದ 80 ರ ಅಡಿಯಲ್ಲಿ ರಾಜ್ಯಸಭೆಯನ್ನು ಅನುಚ್ಛೇದ 171 ರ ಅಡಿಯಲ್ಲಿ ರಾಜ್ಯ ವಿದಾನ ಪರಿಷತ್ತು ಗಳು ಸ್ಥಾಪನೆಯಾದವು!
ಆದರೆ ಈ ಎರಡೂ ಸದನಗಳ ಸ್ಥಾಪನೆಯ ಉದ್ದೇಶ ಈಡೇರಿದೆಯೇ ಎಂದು ಅವಲೋಕಿಸಿದಾಗ ಇದಕ್ಕೆ ಉತ್ತರಿಸುವ ನೈತಿಕ ಧೈರ್ಯ ಯಾವುದೇ ರಾಜಕೀಯ ಪಕ್ಷಗಳಿಗಿರಲಿ ಸ್ವತಃ ಈ ಎರಡೂ ಸದನಗಳಿಗೆ ಆಯ್ಕೆಯಾದ ಸದಸ್ಯರುಗಳಿಗೂ ಇದ್ದಂತಿಲ್ಲ!
ದೇಶಕ್ಕೆ ಮಾದರಿಯಾಗಿದ್ದ ರಾಜ್ಯ ವಿದಾನ ಪರಿಷತ್ತು ಇಂದು ಅಕ್ಷರಶಃ ರಾಜಕೀಯ ನಿರಾಶ್ರಿತರ ಶಿಬಿರದಂತಾಗಿದೆ!
ಇನ್ನು ದೇಶದ ರಾಜ್ಯಸಭೆಯನ್ನು ಗಮನಿಸಿದಾಗ ಅದು ಸಹ ಹಲವಾರು ಆರೋಪಗಳಿಗೆ ತುತ್ತಾಗಿದೆ!
ರಾಜ್ಯ ಸಭೆಗೆ ಎಷ್ಟು ಜನ ತಜ್ಞರು ಆಯ್ಕೆಯಾಗುತ್ತಿದ್ದಾರೆ?
ಇದು ಒಂದು ಕಡೆಯಾದರೆ ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ ಅಧಿಕಾರಿಗಳು ರಾಜ್ಯ ಸಭೆಗೆ ಆಯ್ಕೆಯಾಗುತ್ತಿರುವುದು ಮತ್ತು ನಾಮ ನಿರ್ದೇಶನ ಗೊಳ್ಳುತ್ತಿರುವುದು ಹಲವು ಚರ್ಚೆಯನ್ನು ಹುಟ್ಟುಹಾಕಿದೆ!
ಈಗಾಗಲೇ ರಾಜ್ಯ ಸಭೆ ಸದಸ್ಯರಾಗಿದ್ದ ಬಹರುಲ್ ಇಸ್ಲಾಂ ಅವರನ್ನು ಅಸ್ಸಾಂ (ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ, ನಂತರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಿ, ನಿವೃತ್ತ ರಾದ ನಂತರವೂ ರಾಜ್ಯ ಸಭೆಗೆ ಆಯ್ಕೆ ಮಾಡಲಾಗಿತ್ತು) ಹಾಗೂ ರಂಗನಾಥ್ ಮಿಶ್ರಾ ಅವರನ್ನು ಕಾಂಗ್ರೆಸ್ ಆಯ್ಕ ಮಾಡಿತ್ತು!
ಕಾಂಗ್ರೆಸ್ ಕಲಿಸಿದ ಪರಿಪಾಠವನ್ನೇ ಬಿಜೆಪಿ, ಟಿ.ಎಂ.ಸಿ, ಸಮಾಜವಾದಿ ಪಕ್ಷ, ಸಂಯುಕ್ತ ಜನತಾದಳ, ಹೀಗೆ ಎಲ್ಲಾ ಪಕ್ಷಗಳು ಮುಂದುವರೆಸಿವೆ!
ಕೆ.ನಟವರ್ ಸಿಂಗ್ ( IFS), ಆರ್.ಸಿ.ಪಿ.ಸಿಂಗ್ ( IAS), ಕೆ.ಜೆ.ಅಲ್ಫೋನ್ಸ್ ( IAS), ಹರ್ದೀಪ್ ಸಿಂಗ್ ಪುರಿ ( IFS), ಡಾ!!ಎಸ್.ಜೈಶಂಕರ್ ( IFS), ಬ್ರಿಜ್ ಲಾಲ್ ( IPS), ಜವ್ಹರ್ ಸಿರ್ಕಾರ್ ( IAS), ಅಲೋಕ್ ರಂಜನ್ ( (IAS), ಇಷ್ಟು ಜನರು ರಾಜ್ಯ ಸಭೆಗೆ ಆಯ್ಕೆಯಾದ ನಿವೃತ್ತ ಅಧಿಕಾರಿಗಳು!
ವಿಶೇಷವೆಂದರೆ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯರಾಗಿದ್ದ ಬಹರುಲ್ ಇಸ್ಲಾಂ ಅವರನ್ನು ಅಸ್ಸಾಂ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಮಾಡಿದ್ದರಿಂದ ರಾಜ್ಯ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಪುನಃ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರು. ಪುನಃ ರಾಜಿನಾಮೆ ನೀಡಿ ರಾಜ್ಯ ಸಭೆಗೆ ಆಯ್ಕೆಯಾದರು!
ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಂಜನ್ ಗೊಗೋಯಿ ಅವರನ್ನು ರಾಜ್ಯ ಸಭೆಗೆ ನೇರವಾಗಿ ನಾಮ ನಿರ್ದೇಶನ ಮಾಡಿದರು!
ಇದು ರಾಜ್ಯ ಸಭೆ ನೆಡೆದು ಬಂದ ಇತಿಹಾಸ!
ಆದರೆ ಬಹುಮುಖ್ಯವಾದ ಪ್ರಶ್ನೆ ಇರುವುದು ರಾಜಕೀಯ ಪಕ್ಷಗಳು ಸಂವಿಧಾನದ ಒಳಸುಳಿಯಲ್ಲಿರುವ ನ್ಯೂನತೆಗಳನ್ನು ಬಳಸಿಕೊಂಡು ಶಾಸಕಾಂಗದೊಳಗೆ ನುಸುಳುತ್ತಿರುವುದರ ಬಗ್ಗೆ!
ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಉದ್ದೇಶಗಳು ಈಡೇರುತ್ತಿದೆಯೇ?
ರಾಜಕೀಯ ಪಕ್ಷಗಳು ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಶಾಸಕಾಂಗ( ರಾಜ್ಯ ಸಭೆ, & ವಿದಾನ ಪರಿಷತ್) ಗೆ ಆಯ್ಕೆ ಮಾಡಿದರೆ ಜನಸಾಮಾನ್ಯರ ಬದುಕು ಬವಣೆಗಳನ್ನು ಪ್ರತಿನಿಧಿಸುವವರಾರು?
ನ್ಯಾಯಾಂಗ ಅಥವಾ ಕಾರ್ಯಾಂಗದ ಹಿರಿಯ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಎಷ್ಟು ಬಾರಿ ಜನಪರವಾಗಿ ಕರ್ತವ್ಯ ನಿರ್ವಹಿಸಿದ್ದರು?
ಇವರು ತಮ್ಮ ಕ್ಷೇತ್ರದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಅದ್ಯಾವ ರೀತಿಯಲ್ಲಿ ಜನಸಾಮಾನ್ಯರ ಧ್ವನಿಯಾಗಿದ್ದಾರೆ?
ಅಷ್ಟಕ್ಕೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎನ್ನಬಹುದೇ ವಿನಃ ಇವರು ಸೇವೆ ಸಲ್ಲಿಸಿದ್ದಾರೆ ಎನ್ನಲು ಇವರು ಗೌರವಯುತ ವಾಗಿ ವೇತನ ಪಡೆದಿಲ್ಲವೇ?
ಸರ್ಕಾರದ ಸಂಬಳ ಪಡೆಯುತ್ತಾ ಜೀವನ ಸಂಧ್ಯಾಕಾಲದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದಾದರೆ ಇವರ ವಿಚಾರಧಾರೆಯಲ್ಲವೂ ಆಯ ಪಕ್ಷಗಳದ್ದೇ ಆಗಿರುತ್ತವೆ.
ಹಾಗೂ ಪಕ್ಷಗಳ ಋಣ ತೀರಿಸುವ ಕೆಲಸವನ್ನು ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಹಾಗೂ ನಿವೃತ್ತರು ಮಾಡಿಯೇ ಇರುತ್ತಾರೆ!
ಈ ಕಾರಣಕ್ಕಾಗಿಯೇ ಇವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿರುತ್ತಾರೆ!
ರಾಜ್ಯ ಸಭೆಯ ಇತಿಹಾಸದಲ್ಲೇ ಬಿಜೆಪಿ ನಿವೃತ್ತ ನ್ಯಾಯಮೂರ್ತಿ ರಂಜನ್ ಗೋಗೋಯ್ ಅವರನ್ನು ನೇರವಾಗಿ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟು ಬಿಟ್ಟಿತು!
ಅಷ್ಟಕ್ಕೂ ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿದ ನಂತರ ರಂಜನ್ ಗೋಗಯಿ ಅವರು ಅದೆಷ್ಟು ಬಾರಿ ಸದನದಲ್ಲಿ ಧ್ವನಿ ಎತ್ತಿದ್ದಾರೆ?
ಇವರ ಹಾಜರಾತಿ ಎಷ್ಟಿದೆ ಎಂದು ನೋಡಿದರೆ ಬಿಜೆಪಿ ಅದ್ಯಾವ ಪುರುಷಾರ್ಥಕ್ಕೆ ನಾಮ ನಿರ್ದೇಶನ ಮಾಡಿತು ಎಂಬುದನ್ನು ಬಹಿರಂಗ ಪಡಿಸಲೇಬೇಕು!
ಕಲೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ ಹೀಗೆ ಹಲವು ಕ್ಷೇತ್ರದಲ್ಲಿ ಅಪಾರ ಅನುಭವ ಇರುವವರನ್ನು ಅವರು ತಮ್ಮ ಕ್ಷೇತ್ರದಲ್ಲಿ ಹೊಂದಿರುವ ಜ್ಞಾನವನ್ನು ಸದನಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿತ್ತು ಆದರೆ ದುರಾದೃಷ್ಟವಶಾತ್ ಕಲೆ ಸಾಹಿತ್ಯ ವಿಜ್ಞಾನ ಸಮಾಜ ಸೇವೆಗಳು ಸಹ ಪಕ್ಷಗಳ ಸೈದ್ಧಾಂತಿಕ ನಿಲುವುಗಳಿಗನುಗುಣವಾಗಿ ಬದಲಾಗುತ್ತಿರುವುದು ದುರ್ದೈವ!
ಈ ಕಾರಣದಿಂದಾಗಿಯೇ ಕಾರ್ಯಾಂಗ ನ್ಯಾಯಾಂಗ ಮಾಧ್ಯಮಗಳು ಸಹ ಪಕ್ಷಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ!
ಕೇಂದ್ರದಲ್ಲಿ ರಾಜ್ಯ ಸಭೆ, ರಾಜ್ಯದಲ್ಲಿ ವಿದಾನ ಪರಿಷತ್ತು ತನ್ನ ಅರ್ಥವನ್ನೇ ಕಳೆದುಕೊಂಡಿವೆ!
ಆದ್ದರಿಂದ ಸಂವಿಧಾನದ ಅನುಚ್ಛೇದ 80 & 171 ಗಳನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಬೇಕಾದ ಸಂದರ್ಭ ಎದುರಾಗಿದೆ!
ಆದರೆ ಈ ಬಗ್ಗೆ ಧ್ವನಿ ಎತ್ತಬೇಕಾದವರು ಯಾರು?

ಭಾಸ್ಕರ ಎಂ ಮುದೇನೂರು
ನ್ಯಾಯವಾದಿಗಳು
