ಈ ಹುಡುಗ ಬ್ಯಾಟ್ ಬೀಸಿದ್ರೆ ಆರ್.ಸಿ.ಬಿ ಸೋಲುತ್ತೆ ಅಂತ ಗೊತ್ತಿತ್ತು. ಆದರೂ ಇವನು ಹೊಡೆಯಲಿ, ಚಚ್ಚಲಿ ಅಂತ ಮನಸು ಹೇಳುತ್ತಿತ್ತು. ಆತನ ಆಟದ ವೈಭವ ತುಂಬಿಕೊಳ್ಳಲು ಕಣ್ಣು ತವಕಿಸುತಿತ್ತು!!
ಘಟಾನುಘಟಿ ಬೌಲರ್ ಗಳನ್ನು ಪಿಳ್ಳೆಪಿಸುಕಿನಂತೆ ಹಿಚುಕಿ ಹಾಕಿದ ಈ 15ರ ಕಿಶೋರ ಭವಿಷ್ಯ ಭಾರತದ ಭವ್ಯ ಮುಕುಟವಾಗುವ ಲಕ್ಷಣಗಳು ನಿಚ್ಚಳ. 6 ಮತ್ತು 4 ರನ್ ಗಳನ್ನು ಅಳಗುಳಿ ಮಣೆಯ ಹುಣಸೆಬೀಜ ಮಾಡಿಕೊಂಡು 26 ಬಾಲ್ ಗಳಲ್ಲಿ 78 ರನ್ ಸ್ಫೋಟಿಸಿದ ಆತನ ಆಟದ ವೈಭೋಗ ಕಣ್ಣಿಗೊಂದು ಕಿಕ್. ಆತನ ಅಕ್ಷಿ ಮತ್ತು ಹಸ್ತ ಸಂವಹನ, ಸಂಯೋಜನೆ ಕಲೆ ಬ್ಯಾಟ್ ಗೇ ಒಂದು ಸೋಜಿಗ!
ಅದೇ ರೀತಿ ಮೊನ್ನೆಯ ರಾತ್ರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಿನ ಘೋರ ಕರಾಳ ರಾತ್ರಿಯನ್ನಾಗಿಸಿ, ಪಂದ್ಯವನ್ನೇ ತಿರುಗು-ಮುರುಗು ಮಾಡಿದ ಲಕ್ನೌ ಸೂಪರ್ ಜೈಂಟ್ಸ್ ನ 21 ವರ್ಷದ ಮುಕುಲ್ ಚೌಧರಿ ((27 ಬಾಲ್ 54 ರನ್ ) ಆಟದ ಆರ್ಭಟ ಕೂಡ ಕಣ್ಣವೆಯಿಂದ ಇನ್ನೂ ಜಾರಿಲ್ಲ!
ಪಂದ್ಯವನ್ನು ಯಾರು ಗೆಲ್ಲುತ್ತರೋ, ಬಿಡುತ್ತಾರೋ ಒಟ್ಟಿನಲ್ಲಿ ನೈಜ ಪ್ರತಿಭೆಗಳು ಬೆಳೆಯಬೇಕು – ಆಗಸದೆತ್ತರಕ್ಕೆ..!
ಏಕೆಂದರೆ ಇವರೆಲ್ಲರೂ ಭವಿಷ್ಯ ಭಾರತದ ‘ಹೊನ್ನ ಕಳಸ’ಗಳು!
ವಿಷೇಶ ಲೇಖನ :: ತ್ಯಾಗರಾಜ ಹಿರಿಯ ಪತ್ರಕರ್ತರು
