Sunday, May 17, 2026
Homeಜಿಲ್ಲಾ ಸುದ್ದಿಗಳುಯುವಕರಿಗೆ ಉತ್ತಮ ಶಿಕ್ಷಣ ನೀಡಿದರೆ ಭವ್ಯ ಭಾರತ ನಿರ್ಮಾಣ ಸಾಧ್ಯ: ಶಾಸಕ ಲಕ್ಷ್ಮಣ ಸವದಿ

ಯುವಕರಿಗೆ ಉತ್ತಮ ಶಿಕ್ಷಣ ನೀಡಿದರೆ ಭವ್ಯ ಭಾರತ ನಿರ್ಮಾಣ ಸಾಧ್ಯ: ಶಾಸಕ ಲಕ್ಷ್ಮಣ ಸವದಿ

ಅಥಣಿ: “ಯುವ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಭವ್ಯ ಭಾರತದ ನಿರ್ಮಾಣ ಸಾಧ್ಯ. ಇದೇ ಆಶಯದೊಂದಿಗೆ ಅಥಣಿ ಮತಕ್ಷೇತ್ರದಲ್ಲಿ ಬಡವರು ಮತ್ತು ಸಾಮಾನ್ಯ ಜನರಿಗೂ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತೆ ಶೈಕ್ಷಣಿಕ ಕ್ರಾಂತಿ ಮಾಡಲಾಗುತ್ತಿದೆ,” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

“ಆರಂಭದಲ್ಲಿ ಕೇವಲ ನೂರರ ಸಂಖ್ಯೆಯಲ್ಲಿದ್ದ ಈ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಇಂದು ಎರಡು ಸಾವಿರ ದಾಟಿರುವುದು ಹೆಮ್ಮೆಯ ಸಂಗತಿ. ಈ ಕಾಲೇಜು ರಾಜ್ಯದಲ್ಲೇ ಮಾದರಿ ಕಾಲೇಜಾಗಿ ಆಯ್ಕೆಯಾಗಿದ್ದು, ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಪಡೆಯಲಿದೆ. ನಮ್ಮ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಾರ್ಥನಾ ಬಿರಾದಾರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಬಸವರಾಜ ಐಎಫ್‌ಎಸ್ (IFS) ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ,” ಎಂದು ಶಾಸಕರು ಹೆಮ್ಮೆಯಿಂದ ಸ್ಮರಿಸಿದರು.

ಕ್ಷೇತ್ರದ ಶೈಕ್ಷಣಿಕ ಪ್ರಗತಿಯನ್ನು ತೆರೆದಿಟ್ಟ ಶಾಸಕರು, “ಜನಸಾಮಾನ್ಯರ ಅನುಕೂಲಕ್ಕಾಗಿ ಅಥಣಿ, ತೇಲಸಂಗ ಮತ್ತು ಕೋಕಟನೂರ ಗ್ರಾಮಗಳಲ್ಲಿ ಮೂರು ಪದವಿ ಕಾಲೇಜುಗಳು, 11 ಪ್ರೌಢಶಾಲೆಗಳು ಹಾಗೂ ಹೊಸ ಪಿಯು ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಕೊ ಕಟನೂರ್, ಕೋ ಹಳ್ಳಿ ಮತ್ತು ಸತ್ತಿಯಲ್ಲಿ ಕೆಪಿಎಸ್ ಮಾದರಿ ಶಾಲೆಗಳನ್ನು ಆರಂಭಿಸಲಾಗಿದೆ. ಕಾರ್ಮಿಕರ ಮಕ್ಕಳಿಗಾಗಿ ಎಂಟು ಎಕರೆ ಪ್ರದೇಶದಲ್ಲಿ ‘ಶ್ರಮಿಕ ವಸತಿ ಶಾಲೆ’ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದಿಂದ ಆರಂಭವಾಗಲಿದೆ. 185 ಕೋಟಿ ರೂ. ವೆಚ್ಚದ ಪಶು ವೈದ್ಯಕೀಯ ಕಾಲೇಜು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, 508 ಕೋಟಿ ರೂ. ವೆಚ್ಚದಲ್ಲಿ ಕೃಷಿ ಕಾಲೇಜು ಹಾಗೂ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ,” ಎಂದರು.
ಇದೇ ವೇಳೆ, ಪ್ರೊ. ರಾಜು ಭಜಂತ್ರಿ ಅವರ ಸಂಪಾದಕತ್ವದಲ್ಲಿ ಸಿದ್ಧವಾದ ಮಹಾವಿದ್ಯಾಲಯದ ‘ಜ್ಞಾನ ದೀಪ’ ಸ್ಮರಣ ಸಂಚಿಕೆಯನ್ನು ಶಾಸಕರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ತಹಸೀಲ್ದಾರ್ ಸಿದ್ರಾಯಿ ಬೋಸಗಿ ಮಾತನಾಡಿ, “ವಿದ್ಯಾರ್ಥಿಗಳು ಅಥಣಿಯಲ್ಲಿ ಸಿಗುತ್ತಿರುವ ಅಪಾರ ಶೈಕ್ಷಣಿಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಉತ್ತಮ ಸ್ನೇಹಿತರ ಒಡನಾಟದೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು,” ಎಂದರು. ಜಮಖಂಡಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಯಶವಂತ ಕೊಕ್ಕನವರ ವಿಶೇಷ ಉಪನ್ಯಾಸ ನೀಡಿ, “ವಿದ್ಯಾರ್ಥಿಗಳು ಸಕಾರಾತ್ಮಕ ಧೋರಣೆ ತಳೆಯಬೇಕು. ಮೊಬೈಲ್, ಟಿವಿ ವ್ಯಾಮೋಹ ಹಸಿರು ಪ್ರೀತಿಯ ಹುಚ್ಚು ಬಿಟ್ಟು ನಿರಂತರ ಓದಿನತ್ತ ಗಮನ ಹರಿಸಬೇಕು. ಹೆತ್ತವರನ್ನು ಸೇವೆ ಮಾಡುತ್ತಾ ಉತ್ತಮ ನಾಗರಿಕರಾಗಬೇಕು,” ಎಂದು ಕಿವಿಮಾತು ಹೇಳಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ವಿಲಾಸ್ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ದಿವಾನಮಳ ಸ್ವಾಗತಿಸಿದರು. ಡಾ. ಆರ್.ಎ. ಬಡಿಗೇರ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಜಿನೇಂದ್ರ ಬಣಜವಾಡ, ಡಾ. ಶಾಂತಿನಾಥ ಬಳೋಜ, ಉಂಡಾಡಿ ಸಂತೋಷ್, ಡಾ. ಸುರೇಶ ತಕತರಾವ, ಡಾ. ಮಹಾಂತೇಶ ಉಕ್ಕಲಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಾ. ಆರ್.ಎಸ್. ದೊಡ್ಡನಿಂಗಪ್ಪಗೋಳ ಹಾಗೂ ಪ್ರೊ. ಕವಿತಾ ಘಟಕಾಂಬಳೆ ಕಾರ್ಯಕ್ರಮ ನಿರೂಪಿಸಿದರೆ, ಪ್ರೊ. ಅನಿಷಾ ನಿಡೋಣಿ ವಂದಿಸಿದರು.

ಹೆಚ್ಚಿನ ಸುದ್ದಿ