ಯುಕೆಪಿ ಭೂಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ
ಹಿಂದೆ ಯಾವ ಸರ್ಕಾರವೂ ಮಾಡದ ತೀರ್ಮಾನ ನಮ್ಮಿಂದ ಆಗಿದೆ
ಯುಕೆಪಿ ಯೋಜನೆಗೆ ಆಂಧ್ರ, ಮಹಾರಾಷ್ಟ್ರ ಅಡ್ಡಗಾಲು
ಬಡವರಿಗಾಗಿ ಮೆಡಿಕಲ್ ಕಾಲೇಜು ಆರಂಭ
ಬಾಗಲಕೋಟೆ, ಮಾ.14:
“ನಮ್ಮ ಸರ್ಕಾರ ಮುಡಿದಂತೆ ನಡೆಯುತ್ತಿದ್ದು, ಬಡವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಹೀಗಾಗಿ ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿ, ಮತ್ತೆ ನಿಮ್ಮ ಗ್ಯಾರಂಟಿ ಸರ್ಕಾರಕ್ಕೆ ಆಶೀರ್ವಾದ ಮಾಡಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬಾಗಲಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಯುಕೆಪಿ ಯೋಜನೆ ಮೂರನೇ ಹಂತದ ಭೂಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ ಮಾಡಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ನೀವು ನಮಗೆ ಆಶಿರ್ವಾದ ಮಾಡಿದಿರಿ, ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ದೇಶಕ್ಕೆ ಮಾದರಿಯಾಗಿದ್ದೇವೆ. ಕರ್ನಾಟಕವನ್ನು ನೋಡಿಕೊಂಡು ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಘೋಷಣೆ ಮಾಡಲಾಗುತ್ತಿದೆ. ಚುನಾವಣೆಗೂ ಮುನ್ನ ನಾನು ಇಲ್ಲಿಗೆ ಬಂದಾಗ, ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚಂದ ಎಂದು ಹೇಳಿದ್ದೆ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದ ಕಾರಣಕ್ಕೆ ಈ ಯೋಜನೆ ಜಾರಿಯಾಗಿವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಮ್ಮ ಸರ್ಕಾರ ಗ್ಯಾರಂಟಿ ಯೋಜನಗಳ ಮೂಲಕ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಸಾವಿರ ರೂ. ಉಳಿತಾಯವಾಗುವಂತೆ ಮಾಡಿದೆ” ಎಂದು ತಿಳಿಸಿದರು.
“ಕೆಲವೇ ದಿನಗಳಲ್ಲಿ ಮೇಟಿ ಅವರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮೇಟಿ ಅವರು ಎಷ್ಟು ಅಂತರದಿಂದ ಗೆದ್ದರೋ ಅದಕ್ಕಿಂತ ಹೆಚ್ಚಿನ ಅಂತರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಈ ಜಿಲ್ಲೆಯ ನಮ್ಮ ಎಲ್ಲಾ ನಾಯಕರು ನಿಮ್ಮ ಸೇವೆ ಮಾಡಲು ಸಿದ್ಧವಿದ್ದೇವೆ. ನಾವು ನಿಮ್ಮ ಜತೆಗೆ ಇದ್ದೇವೆ ಎಂದು ಹೇಳಲು ನಾವು ಇಲ್ಲಿಗೆ ಬಂದಿದ್ದೇವೆ. ಕಳೆದ ವರ್ಷ ನಡೆದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಇಬ್ಬರು ಮಾಜಿ ಸಿಎಂ ಪುತ್ರರನ್ನು ಜನ ಸೋಲಿಸಿದರು. ಈ ಗ್ಯಾರಂಟಿ ಸರ್ಕಾರಕ್ಕೆ ಆಶೀರ್ವಾದ ಮಾಡಿದರು. ಇದು ನಮ್ಮದೇ ಕ್ಷೇತ್ರ, ಬಡವರಿಗೆ ನಾವು ಮಾಡುತ್ತಿರುವ ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ನೀವುಗಳೇ ನಮಗೆ ಆಶೀರ್ವಾದ ಮಾಡಬೇಕು” ಎಂದು ತಿಳಿಸಿದರು.
ಯಾವ ಸರ್ಕಾರವೂ ಮಾಡದ ತೀರ್ಮಾನ ನಾವು ಮಾಡಿದ್ದೇವೆ
“ಮಾನವ ಸೇವೆಯೇ ದೇವರ ಸೇವೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಜಾತಿ ಕೇಳಬೇಡ ಗುಣ ಕೇಳು ಎಂದು ಮಾರ್ಗದರ್ಶನ ನೀಡಿದ್ದಾರೆ. ಧರ್ಮ ಮಾತಿನಲ್ಲಿ ಅಲ್ಲ, ನಡತೆಯಲ್ಲಿ ಇರಬೇಕು. ಹೀಗಾಗಿ ನಾವು ರೈತರ ಬದುಕಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಮುಂದಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಹದಿನೈದು ವರ್ಷಗಳ ಹಿಂದೆ ನ್ಯಾಯಾಧಿಕರಣ ಆದೇಶ ನೀಡಿದ್ದರೂ ಕೇಂದ್ರ ಸರ್ಕಾರ ಅದನ್ನು ಜಾರಿಗೆ ತರಲಿಲ್ಲ. ಆದರೂ ಬಾಗಲಕೋಟೆ, ಬಾದಾಮಿ, ವಿಜಯಪುರ, ಕಲಬುರ್ಗಿ ಭಾಗದ ಜನರ ಬಗ್ಗೆ ತೀರ್ಮಾನ ಮಾಡಲು, ನಾವು ಚರ್ಚೆ ಮಾಡಿದೆವು. ಈ ಭಾಗದ ಎಲ್ಲಾ ನಾಯಕರ ಒತ್ತಾಯದ ಮೇರೆಗೆ ನಾವು ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಐದಾರು ಬಾರಿ ಚರ್ಚೆ ಮಾಡಿದ್ದೇವೆ. ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ಮಾಡಿದ್ದೇವೆ. ರೈತ ಮುಖಂಡರ ಜತೆ ಚರ್ಚೆ ಮಾಡಿ, 1.33 ಲಕ್ಷ ಎಕರೆ ಭೂಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ನಮ್ಮ ಭೂಮಿ, ನಮ್ಮ ನೀರು, ನಮ್ಮ ಹಕ್ಕು ಎಂದು ಯುಕೆಪಿ ಯೋಜನೆ ಭೂಸಂತ್ರಸ್ತರಿಗೆ ಇಂದು ಪರಿಹಾರದ ಚೆಕ್ ವಿತರಣೆ ಮಾಡುತ್ತಿದ್ದೇವೆ. ಈ ವರ್ಷವೇ 3 ಸಾವಿರ ಕೋಟಿ ರೂ. ಪರಿಹಾರ ವಿತರಣೆ ಮಾಡಲು ನಾವು ತೀರ್ಮಾನಿಸಿದ್ದೇವೆ. ಇಂದು ಚೆಕ್ ವಿತರಣೆ ಮಾಡಲು ನಾವು ಇಂದು ಬಂದಿದ್ದೇವೆ” ಎಂದರು.
“ಕಾವೇರಿ ಹೋರಾಟದಲ್ಲಿ ಜಯ ಸಿಕ್ಕಿರುವುದಕ್ಕೆ ನಮಗೆ ಸಮಾಧಾನವಿದೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯ ಒದಗಿಸಿದೆ. ನಾನು ಅನೇಕ ರೈತರಿಗೆ ನ್ಯಾಯಾಲಯದ ಮೆಟ್ಟಿಲೇರಬೇಡಿ ಎಂದು ಮನವಿ ಮಾಡಿದೆ. ಕೆಲವು ವಕೀಲರು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತಾರೆ ಎಂದು ಕೇಳಿಕೊಂಡೆ. ಆದರೂ ಕೇಳದೇ ಕೋರ್ಟ್ ಮೆಟ್ಟಿಲೇರಿದರು. ಆದರೆ ಸುಪ್ರೀಂ ಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿದ್ದಾರೆ. ಆ ನ್ಯಾಯಾಲಯಕ್ಕೆ ನಾನು ಇಲ್ಲಿಂದಲೇ ತಲೆಬಾಗುವೆ. 29 ಸಾವಿರ ಜನ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿದ್ದಾರೆ. ನಾನು ಈ ವೇದಿಕೆ ಮೂಲಕ ರೈತರಿಗೆ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಯಾವ ಸರ್ಕಾರವು ತೆಗೆದುಕೊಳ್ಳದ ತೀರ್ಮಾನವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಇದು ನಿಮ್ಮ ಸರ್ಕಾರ” ಎಂದು ತಿಳಿಸಿದರು.
ಯುಕೆಪಿ ಯೋಜನೆ ಜಾರಿಗೆ ಆಂಧ್ರ, ಮಹಾರಾಷ್ಟ್ರ ತಕರಾರು
“ನಮ್ಮ ಈ ತೀರ್ಮಾನ ನೋಡಿ ನೆರೆಯ ಆಂಧ್ರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು ಎಂದು ಆಕ್ಷೇಪಣಾ ಪತ್ರ ಬರೆದಿದ್ದಾರೆ. ರೈತರಿಗೆ ಪರಿಹಾರ ನೀಡಬಾರದು, ಭೂಸ್ವಾಧೀನ ಪ್ರಕ್ರಿಯೆ ನಡೆಸಬಾರದು, ಅಣೆಕಟ್ಟು ಎತ್ತರಿಸಬಾರದು ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇವರ ಜತೆಗೆ ಮಹಾರಾಷ್ಟ್ರ ಕೂಡ ಈ ಯೋಜನೆ ಜಾರಿಯಾಗಬಾರದು ಎಂದು ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅವರಿಗೆ ಮನವರಿಕೆ ಮಾಡಲು ನಾನು ಪ್ರಯತ್ನಿಸಿದೆ. ಎರಡು ಬಾರಿ ಕೇಂದ್ರ ಸಚಿವರು ಸಭೆ ಕರೆದರೂ ಒಮ್ಮೆ ಮಹಾರಾಷ್ಟ್ರದವರು ಸಭೆ ಮುಂದೂಡಿದರೆ, ಮತ್ತೊಮ್ಮೆ ಆಂಧ್ರ ಪ್ರದೇಶದವರು ಮುಂದೂಡಿದರು. ನಂತರ ಈ ತಕರಾರು ಹಾಕಿದ್ದಾರೆ” ಎಂದು ತಿಳಿಸಿದರು.
“ಈ ವಿಚಾರವಾಗಿ ಸಂಸದರೊಂದಿಗೆ ಚರ್ಚೆ ಮಾಡಿ, ನಮ್ಮ ಯಾವುದೇ ಯೋಜನೆಗಳಿಗೆ ಅಡ್ಡಿಪಡಿಸದೇ, ಅನುಮತಿ ನೀಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹಾಕಲು ನಾವು ದೆಹಲಿಗೆ ಹೋಗುತ್ತಿದ್ದೇವೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅಪಮಾನ, ಅದೇ ರೀತಿ ನಾವು ಮಾಡುವ ಪ್ರತಿ ಕೆಲಸದಲ್ಲಿ ಆದರ್ಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ” ಎಂದರು.
ಬಡವರಿಗಾಗಿ ಮೆಡಿಕಲ್ ಕಾಲೇಜು ಆರಂಭ
“ಬಡವರಿಗಾಗಿ ನಾವು ಈ ಭಾಗದಲ್ಲಿ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಬಡವರಿಗೆ ನೆರವಾಗಲು ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಮಾಡಲು ಸಂಕಲ್ಪ ಮಾಡಿದ್ದೇವೆ. ಕರ್ನಾಟಕದಲ್ಲಿ 70 ಮೆಡಿಕಲ್ ಕಾಲೇಜುಗಳಿವೆ. ರಾಜ್ಯದಲ್ಲಿ ಬಡವರ ಮಕ್ಕಳಿಗಾಗಿ 13,945 ಮೆಡಿಕಲ್ ಸೀಟುಗಳನ್ನು ನೀಡಲಾಗಿದೆ. 7,501 ಪಿಜಿ ಸೀಟುಗಳಿವೆ. 3,405 ದಂತ ವೈದ್ಯಕೀಯ ಕಾಲೇಜು, 933 ಪಿಜಿ ಸೀಟುಗಳಿವೆ. 44 ಸಾವಿರ ನರ್ಸಿಂಗ್ ಸೀಟುಗಳಿವೆ. ಪ್ಯಾರಾ ಮೆಡಿಕಲ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಸೀಟುಗಳನ್ನು ನೀಡಲಾಗಿದೆ. ಇದರೊಂದಿಗೆ ಕರ್ನಾಟಕ ರಾಜ್ಯ ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಮಾದರಿಯಾಗಿದೆ. ಮೇಟಿ ಅವರ ಕನಸಿನಂತೆ ನಾವು ಮೆಡಿಕಲ್ ಕಾಲೇಜಿಗೆ ಭೂಮಿ ಪೂಜೆ ಮಾಡಿದ್ದೇವೆ” ಎಂದು ತಿಳಿಸಿದರು.
