ಬೀದರ್, ಭಗತಸಿಂಗ್ ವೃತ್ತ ಕಮಿಟಿಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರ ನೇತೃತ್ವದಲ್ಲಿ ಇಂದು ನಗರದ ಭಗತಸಿಂಗ್ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ದೇಶಾಭಿಮಾನಿ, ದೇಶಪ್ರೇಮಿ, ಕ್ರಾಂತಿಕಾರಿ ಶಹೀದ್ ಭಗತಸಿಂಗರ 116 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕ್ರಾಂತಿಕಾರಿ ಶಹೀದ್ ಭಗತಸಿಂಗರ ಪ್ರತಿಮೆಗೆ ಡಿ.ವೈ.ಎಸ್.ಪಿ. ಕೆ.ಎಂ. ಸತೀಶ ಅವರು ಮಾಲಾರ್ಪಣೆ ಮಾಡುವ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
ಭಗತಸಿಂಗ್ ವೃತ್ತ ಕಮಿಟಿಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಮಾತನಾಡುತ್ತ, ಭಗತಸಿಂಗ್ ವೃತ್ತದ ನವೀಕರಣಕ್ಕೆ 5 ಲಕ್ಷ ರೂಪಾಯಿ ಬೀದರ ನಗರಸಭೆಯಲ್ಲಿ ಟೆಂಡರ್ ಆಗಿದೆ. ಟೆಂಡರ್ ಆಗಿ ಒಂದು ವರ್ಷವಾದರೂ ವೃತ್ತದ ನವೀಕರಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಬೀದರ ನಗರಸಭೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ನವೀಕರಣ ಕಾಮಗಾರಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿಕೊಂಡರು.
2024ರ ಮಾರ್ಚ 23 ರಂದು ಕ್ರಾಂತಿಕಾರಿ ಶಹೀದ್ ಭಗತಸಿಂಗರ ಹುತಾತ್ಮ ದಿನಾಚರಣೆ ದಿನದಂದು ಭಗತಸಿಂಗ್ ವೃತ್ತದಲ್ಲಿ ಪಂಚಲೋಹದ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಕೇಂದ್ರ ಸರ್ಕಾರ ಕ್ರಾಂತಿಕಾರಿ ಶಹೀದ್ ಭಗತಸಿಂಗರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಆದೇಶಿಸಬೇಕು ಎಂದು ವಿನಂತಿಸಿಕೊಂಡರು.