Thursday, April 16, 2026
Homeಜಿಲ್ಲಾ ಸುದ್ದಿಗಳುಮಹಿಳಾ ಸಮಾನತೆಗೆ ಅಂಬೇಡ್ಕರ್ ಹೋರಾಟ: ಲಿಂಗಸುಗೂರಿನಲ್ಲಿ ಜಯಂತಿ ಸಂಭ್ರಮ

ಮಹಿಳಾ ಸಮಾನತೆಗೆ ಅಂಬೇಡ್ಕರ್ ಹೋರಾಟ: ಲಿಂಗಸುಗೂರಿನಲ್ಲಿ ಜಯಂತಿ ಸಂಭ್ರಮ


ಲಿಂಗಸುಗೂರು: ಮಹಿಳೆಯರ ಸಮಾನತೆ ಇಲ್ಲದೆ ಸಮಾಜದಲ್ಲಿ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬ ಸಂದೇಶದೊಂದಿಗೆ ಪಟ್ಟಣದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ 135ನೇ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಮಹಿಳೆಯರು ಇಂದು ಅನುಭವಿಸುತ್ತಿರುವ ಹಕ್ಕುಗಳು ಮತ್ತು ಗೌರವಕ್ಕೆ ಮೂಲ ಕಾರಣ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳೇ ಎಂದು ಹೇಳಿದರು. ಶಿಕ್ಷಣದ ಮೂಲಕವೇ ಸಮಾನತೆ ಸಾಧ್ಯವಾಗುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು.
ಅಂಬೇಡ್ಕರ್ ಅವರು ಕೇವಲ ಸಂವಿಧಾನ ರಚನಾಕಾರರಷ್ಟೇ ಅಲ್ಲದೆ, ಆರ್ಥಿಕ ತಜ್ಞ ಹಾಗೂ ದೂರದೃಷ್ಟಿಯ ನಾಯಕನಾಗಿದ್ದರು. ಹಿಂದುಳಿದವರು, ಶೋಷಿತರು ಮತ್ತು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಮೀಸಲಾತಿ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೆ ತಂದ ಮಹಾನ್ ಚಿಂತಕರೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮಾನಪ್ಪ ವಜ್ಜಲ್, ವಿದ್ಯಾವಂತರಾದವರು ಬಡವರು ಮತ್ತು ಹಿಂದುಳಿದವರ ಪರ ನಿಲ್ಲಬೇಕು. ಆಗ ಮಾತ್ರ ಸಮಾನತೆ ನೆಲೆಯೂರಲಿದೆ ಮತ್ತು ಅಂಬೇಡ್ಕರ್ ಕನಸಿನ ಭಾರತ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕರಾದ ಶಂಕರ ವಾಲಿಕರ ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ