ಬೆಂಗಳೂರು, ಏಪ್ರಿಲ್ 11: ಬೆಂಗಳೂರು ಪೂರ್ವ ನಗರ ಪಾಲಿಕೆಯ ವೈಟ್‌ಫೀಲ್ಡ್ ಉಪವಿಭಾಗದ ಮಹದೇವಪುರ ವಲಯದ ಸಹಾಯಕ ಕಂದಾಯ ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ನಕಲಿ ಖಾತೆಗಳ ವಿರುದ್ಧ ಇಂದು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ನಕಲಿ ಖಾತಾಗಳನ್ನು ತಕ್ಷಣವೇ ರದ್ದುಪಡಿಸಿ, ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಹೋರಾಟದ ನೇತೃತ್ವವನ್ನು ಎಸ್ಎಸ್‌ಡಿ ಯುವ ಘಟಕದ ರಾಜ್ಯಾಧ್ಯಕ್ಷರು ಹಾಗೂ ದಲಿತ ಚಳುವಳಿ ಮುಖಂಡರಾದ ಡಾ. ಎಂ. ನಾಗೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ರಾಷ್ಟ್ರಾಧ್ಯಕ್ಷರಾದ ಅರ್ಜುನ್ ಗೋಪಾಲಯ್ಯ ಮಾತನಾಡಿ, ಸಾರ್ವಜನಿಕ ಆಸ್ತಿ ಹಾಗೂ ದಾಖಲೆಗಳೊಂದಿಗೆ ಆಟವಾಡುವಂತಹ ಭ್ರಷ್ಟಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಮಲಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೆಂಚಯ್ಯ, ಜಿ.ಕೆ. ಗೋಪಾಲ್, ಕೃಷ್ಣ, ಪ್ರಸಾದ್, ಎಚ್‌ಎಸ್‌ಆರ್ ಮಂಜು, ಎ. ಮುನಿರಾಜ್ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
