ಶಿರಸಿ:ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಬೃಹತ್ ಮನೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿ, ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿರಸಿಯ ಕಸ್ತೂರಬಾನಗರದ ಟೀಚರ್ಸ್ ಕಾಲೋನಿ ನಿವಾಸಿ ಶಹತಾಜ್ ಕೊಂ ತಬ್ರೇಜ ಸಾಹೇಬ ಅವರ ಮನೆಗೆ ಏಪ್ರಿಲ್ 18ರ ರಾತ್ರಿ 7:30ರಿಂದ ಏಪ್ರಿಲ್ 19ರ ಬೆಳಿಗ್ಗೆ 11:00 ಗಂಟೆಯ ಅವಧಿಯಲ್ಲಿ ದುಷ್ಕರ್ಮಿಗಳು ಮನೆಯ ಮುಂಬಾಗಿಲು ಹಾಗೂ ಟ್ರೆಜರಿ ಬಾಗಿಲನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ಒಳನುಗ್ಗಿದ್ದರು. ಟ್ರೆಜರಿಯಲ್ಲಿದ್ದ 1 ಲಕ್ಷ ರೂ. ನಗದು ಹಣ ಹಾಗೂ ಅಂದಾಜು 1.30 ಲಕ್ಷ ರೂ. ಮೌಲ್ಯದ 8 ಗ್ರಾಂ ತೂಕದ ಎರಡು ಬಂಗಾರದ ಉಂಗುರಗಳನ್ನು ಕಳವು ಮಾಡಿದ್ದರು. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಸಂಗ್ರಹಿಸಿ ಆರೋಪಿಯ ಜಾಡು ಹಿಡಿದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆರೂರು ನಿವಾಸಿ, ಕೂಲಿ ಕಾರ್ಮಿಕ ಅಬ್ದುಲ್ ಖುದ್ದುಸ್ (21) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳುವಾಗಿದ್ದ 1.30 ಲಕ್ಷ ರೂ. ಮೌಲ್ಯದ ಎರಡು ಚಿನ್ನದ ಉಂಗುರಗಳು (8 ಗ್ರಾಂ), 10,430 ರೂ. ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚು, ಸ್ಕ್ಯಾನರ್ ಮತ್ತು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್.ಪಿ ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಶಶಿಕಾಂತ ವರ್ಮಾ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐ ಬಸವರಾಜ ಕನಶೆಟ್ಟಿ ನೇತೃತ್ವದ ತಂಡದಲ್ಲಿ ಎಎಸ್ಐ ಮಂಗಳಮೂರ್ತಿ ಶಿರಹಟ್ಟಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಸಂತೋಷ ಆರ್.ಕೆ, ಸಂದೀಪ ನಿಂಬಾಯಿ, ರಾಕೇಶ ಎನ್.ಹೆಚ್, ಅರುಣ ಲಮಾಣಿ, ಮಂಜುನಾಥ ಕೆ., ಪ್ರಸಾದ ಎಮ್., ಮಲ್ಲಿಕಾರ್ಜುನ ಕೆ. ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜೀಪ್ ಚಾಲಕರಾದ ಹನುಮಂತ ವಾಲಿಕರ್ ಹಾಗೂ ಕಾರವಾರದ ಟೆಕ್ನಿಕಲ್ ಸೆಲ್ನ ಉದಯ ಗುನಗಾ ಮತ್ತು ಬಬನ್ ಕದಂ ಅವರು ಆರೋಪಿಯನ್ನು ವಶಕ್ಕೆ ಪಡೆಯಲು ಸಹಕರಿಸಿದ್ದಾರೆ.
ಪ್ರಕರಣವನ್ನು ತ್ವರಿತವಾಗಿ ಬೇಧಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.
