Tuesday, March 3, 2026
HomeUncategorizedಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು...

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ


ಬೆಂಗಳೂರು,ಮಾ.2: ತಲತಲಾಂತರದಿಂದಲೂ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮಾ. 16 ರಂದು ನಗರದ ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಮತ್ತು ಉತ್ತರ ಕರ್ನಾಟಕ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂ.ಕೆ. ಹನುಮಂತಪ್ಪ, ದೇಶದ 17 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಮಡಿವಾಳ ಸಮಾಜದ ಹಲವು ದಶಕಗಳ ಹೋರಾಟಕ್ಕೆ 2009 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಡಿವಾಳ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಲು ಪ್ರೊ. ಡಾ|| ಅನ್ನಪೂರ್ಣ ಅವರನ ಸಮಿತಿಯನ್ನು ನೇಮಕ ಮಾಡಿದರು. ಅದರಂತೆ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಆದರೆ ವರದಿ ಅನುಷ್ಠಾನವಾಗಿಲ್ಲ ಎಂದರು.
ಕಳೆದ 2011 ರಿಂದ ಪ್ರತಿ ವರ್ಷವು ಸತತವಾಗಿ ಎಲ್ಲಾ ಸರ್ಕಾರಗಳಿಗೂ ನಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿಕೊಂಡು ಬರುತ್ತಿದ್ದೇವೆ. 2022ರಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಸುವ ಸಲುವಾಗಿ ಕಡತವನ್ನು ಸಚಿವ ಸಂಪುಟಕ್ಕೆ ಮಂಡಿಸಲು ಸಜ್ಜಾಗಿದ್ದರು. ಆದರೆ ಆಗ ಮುಖ್ಯಮಂತ್ರಿಗಳ ಅನುಮೋದನೆ ಮಾತ್ರ ಬಾಕಿ ಇತ್ತು. ಆದರೆ ಈ ಕನಸು ಕೈಗೂಡದೇ ಮತ್ತೆ ಮಡಿವಾಳ ಸಮಾಜಕ್ಕೆ ಅನ್ಯಾಯವಾಯಿತು ಎಂದರು.
2025ರಲ್ಲಿ ಸಮಾಜದ ಜಗದ್ಗುರು ಡಾ. ಬಸವಮಾಚಿದೇವ ಸ್ವಾಮಿಜಿ ಹಾಗೂ ಮುಕ್ತಾನಂದ ಸ್ವಾಮಿಜಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ 19 ಮಂತ್ರಿಗಳು 137 ಶಾಸಕರುಗಳಿಂದ ಸರ್ಕಾರಕ್ಕೆ ಶಿಫಾರಸ್ಸು ಪತ್ರಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ. ಆದ್ದರಿಂದ ಈ ಮುಂಬರುವ ಅದಿವೇಶನದಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಬೆಳಿಗ್ಗೆ 8ರಿಂದ ಫ್ರೀಡಂ ಪಾರ್ಕ್‌ಲ್ಲಿ ಉತ್ತರ ಕರ್ನಾಟಕ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿ ಭಾಗದಿಂದ ಹೆಚ್ಚಿನ ಮಡಿವಾಳರು ಆಗಮಿಸಿ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಮಲ್ಲೇಶ್‌, ಉಪಾಧ್ಯಕ್ಷರಾದ ಬಿ. ಬಸವಶೆಟ್ಟಿ, ಕೆ.ಸಿ. ರವೀಂದ್ರ, ಹಿರಣ್ಯಪ್ಪ ಕುಂಬ್ರಿ, ಟಿ. ಕುಮಾರ ಸ್ವಾಮಿ, ಖಜಾಂಚಿ ಎಸ್.‌ ಧನರಾಜ್‌, ಜಿಲ್ಲಾಧ್ಯಕ್ಷ ಎನ್.‌ ಚಂದ್ರಶೇಖರ್‌ ಮತ್ತಿರರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ