ಬೆಂಗಳೂರು, ನವೆಂಬರ್ 14: ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಕ್ಕಳ ಸಂವಾದವನ್ನು ನ.14ರಂದು ಆಯೋಜಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನವೆಂಬರ್ 14ರಂದು ಬೆಳಿಗ್ಗೆ 9 ಗಂಟೆಗೆ ವಿಧಾನಸೌಧದ ಕೊಠಡಿ ಸಂಖ್ಯೆ: 334 ಸಮ್ಮೇಳನ ಸಭಾಂಗಣದಲ್ಲಿ ಈ ಸಂವಾದ ಏರ್ಪಡಿಸಲಾಗಿದೆ. ಈ ಸಂವಾದದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಇನ್ನೂ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಕ್ಕಳ ದಿನಾಚರಣೆಯಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸುವುದರ ಜೊತೆಗೆ, ಭವಿಷ್ಯದ ಕರ್ನಾಟಕದ ನಿರ್ಮಾಣಕ್ಕೆ ಮಕ್ಕಳಿಂದ ಸಲಹೆಗಳನ್ನು ಪಡೆಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಸರ್ಕಾರಿ ಶಾಲೆಗಳ ಮಕ್ಕಳನ್ನು ಈ ಸಂವಾದಕ್ಕೆ ಆಹ್ವಾನಿಸಲಾಗಿದೆ. ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳೊಂದಿಗೆ ಭವಿಷ್ಯದ ಕರ್ನಾಟಕಕ್ಕಾಗಿ ಸಂವಾದ ನಡೆಸಿ, ಅವರಿಂದ ಬರುವ ಅಮೂಲ್ಯ ಸಲಹೆಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ ರೂಪಿಸುವ ಯೋಜನೆಗಳಲ್ಲಿ ಅಳವಡಿಸಿಕೊಳ್ಳುವ ಉದ್ದೇಶದೊಂದಿಗೆ ಈ ಸಂವಾದ ಏರ್ಪಡಿಸಲಾಗಿದೆ.