ಜಲ ಸಂರಕ್ಷಣೆ, ನೈಸರ್ಗಿಕ ಕೃಷಿ ಸೇರಿ 9 ಪ್ರತಿಜ್ಞೆಗೆ ಬದ್ಧರಾಗಿ- ಪ್ರಧಾನಿ ಮೋದಿಜೀ ಮನವಿ

ಮಂಡ್ಯ: ಜಲ ಸಂರಕ್ಷಣೆ, ನೈಸರ್ಗಿಕ ಕೃಷಿ, ಫಿಟ್‍ನೆಸ್ ಮತ್ತು ಸೇವೆ ಸೇರಿದಂತೆ ಒಂಬತ್ತು ಸಾಮೂಹಿಕ ಪ್ರತಿಜ್ಞೆಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಜೀ ಅವರು ಬುಧವಾರ ಜನರಿಗೆ ಮನವಿ ಮಾಡಿದ್ದಾರೆ.
ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಅವರು ಮಾತನಾಡಿದರು. ‘ನೀರಿನ ಸಂರಕ್ಷಣೆ ಮತ್ತು ನೀರಿನ ಉತ್ತಮ ನಿರ್ವಹಣೆ, ತಾಯಿಯ ಹೆಸರಿನಲ್ಲಿ ಒಂದು ಸಸಿ ಮರ ನೆಡುವುದು, ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಛತೆ, ಸ್ಥಳೀಯ ಉತ್ಪನ್ನಗಳನ್ನು ಬಲಪಡಿಸುವುದು, ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ರಾಸಾಯನಿಕಮುಕ್ತ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು, ರಾಗಿಯೊಂದಿಗೆ ಆರೋಗ್ಯಕರ ಆಹಾರವನ್ನು ಪೆÇ್ರೀತ್ಸಾಹಿಸುವುದು ಮತ್ತು ತೈಲ ಬಳಕೆಯನ್ನು ಕಡಿಮೆ ಮಾಡುವುದು ನಿಮ್ಮ ಆದ್ಯತೆಯಾಗಲಿ’ ಎಂದು ಹೇಳಿದರು.
‘ಯೋಗ ಮತ್ತು ಫಿಟ್‍ನೆಸ್ ಅನ್ನು ಅಳವಡಿಸಿಕೊಳ್ಳುವಂತೆ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ವಿನಂತಿಸಿದರು. ಈ ಒಂಬತ್ತು ನಿರ್ಣಯಗಳ ಕುರಿತು ನಾವು ಪ್ರಾಮಾಣಿಕತೆ ಮತ್ತು ದೃಢನಿಶ್ಚಯದಿಂದ ಮುಂದುವರಿದರೆ, ನಾವು ಅಭಿವೃದ್ಧಿ ಹೊಂದಿದ ಕರ್ನಾಟಕ ಮತ್ತು ಅಭಿವೃದ್ಧಿ ಹೊಂದಿದ ಭಾರತದತ್ತ ವೇಗವಾಗಿ ಮುನ್ನಡೆಯಬಹುದು’ ಎಂದು ತಿಳಿಸಿದರು.
ನನ್ನ ಹೃದಯವು ಇಂದು ಉತ್ತಮ ಭಾವನೆಗಳಿಂದ ತುಂಬಿದೆ, ಅವುಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಶ್ರೀ ಕಾಲ ಭೈರವ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯನ್ನು ವೀಕ್ಷಿಸುವುದು, ಶ್ರೀ ಗುರು ಭೈರವೈಕ್ಯ ಮಂದಿರದ ಭವ್ಯ ಉದ್ಘಾಟನೆಯಲ್ಲಿ ಉಪಸ್ಥಿತನಿರುವುದು, ಐತಿಹಾಸಿಕ ಜ್ವಾಲಾ ಪೀಠದಲ್ಲಿ ಸಮಯ ಕಳೆಯುವುದು, ಆಧ್ಯಾತ್ಮಿಕ ಎತ್ತರವನ್ನು ತಲುಪಿದ ಸಂತರ ಸಹವಾಸವನ್ನು ಪಡೆಯುವುದು ಮತ್ತು ಈಗ ಇಲ್ಲಿ ನೆರೆದಿರುವ ಸಾರ್ವಜನಿಕರ ದರ್ಶನವನ್ನು ಪಡೆದಿದ್ದೇನೆ. ಈ ಅನುಭವಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ ಎಂದು ನುಡಿದರು.
‘ನಿಮ್ಮೆಲ್ಲರ ನಡುವೆ ಬರಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದರು.
“ಈ ಮಂದಿರವು ಒಕ್ಕಲಿಗ ಸಮುದಾಯದವರು ಪೂಜಿಸುವ, ಮಠದ 71 ನೇ ಮಠಾಧೀಶರಾದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳಿಗೆ ಸಮರ್ಪಿತವಾದ ಸ್ಮಾರಕವಾಗಿದೆ. ನಮ್ಮ ಸಮಾಜದಲ್ಲಿ, ಕಾಲಕಾಲಕ್ಕೆ, ಕೇವಲ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಸೀಮಿತವಾಗಿರದೆ, ಇಂತಹ ಮಹಾನ್ ವ್ಯಕ್ತಿಗಳು ಹೊರಹೊಮ್ಮುತ್ತಲೇ ಇದ್ದಾರೆ. ಅವರು ಜನರ ನಡುವೆ ವಾಸಿಸುತ್ತಿದ್ದರು. ಅವರು ಜನರ ಸಂತೋಷ ಮತ್ತು ದುಃಖಗಳನ್ನು ಅರ್ಥಮಾಡಿಕೊಂಡರು. ಸಮಾಜವನ್ನು ದುಃಖ, ಸಂಕಟ ಮತ್ತು ಕಷ್ಟಗಳಿಂದ ಹೊರತರುವ ಮಾರ್ಗವನ್ನು ತೋರಿಸಿದರು’ ಎಂದು ಪ್ರಧಾನಿ ಮೋದಿ ಹೇಳಿದರು.
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೊಂದಿಗೆ ‘ಸೌಂದರ್ಯ ಲಹರಿ ಮತ್ತು ಶಿವ ಮಹಿಮಾ ಸ್ತೋತ್ರಂ’ ಎಂಬ ಪುಸ್ತಕವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
‘ಮಂದಿರ’ ಉದ್ಘಾಟನೆಗೂ ಮುನ್ನ, ಪ್ರಧಾನಮಂತ್ರಿ ಅವರು ಜ್ವಾಲಾ ಪೀಠಕ್ಕೆ ಭೇಟಿ ನೀಡಿದರು. ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೂ ಪ್ರಧಾನಿಯವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಾನ್ಯ ರಾಜ್ಯಪಾಲ ಥಾವರಚಂದ್ ಗೆಲ್ಲೋಟ್, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ, ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
