
ಭಟ್ಕಳ: ತಾಲೂಕಿನ ತಟ್ಟಿಹಕ್ಕಲದಲ್ಲಿ ಇತ್ತೀಚೆಗೆ ಮೀನುಗಾರಿಕೆ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ 11 ಜನರು ಮೃತಪಟ್ಟಿದ್ದು, ಈ ಘಟನೆ ಇಡೀ ಭಾಗವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಈ ದುಃಖದ ಸಂದರ್ಭದಲ್ಲಿ ಮೃತ ಕುಟುಂಬಗಳ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಪ್ರಮೋದ ಮಧ್ವರಾಜ್, ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಸ್ಥರ ಭೇಟಿ ಮಾಡಿದ ಪ್ರಮೋದ ಮಧ್ವರಾಜ್, ಅವರ ಅಳಲು ಆಲಿಸಿದರು. ಈ ಕಠಿಣ ಸಮಯದಲ್ಲಿ ಕುಟುಂಬದವರಿಗೆ ನೈತಿಕ ಬೆಂಬಲ ನೀಡುವುದರ ಜೊತೆಗೆ, ಸಂತ್ರಸ್ತ ಕುಟುಂಬಗಳಿಗೆ ತಮ್ಮ ವೈಯಕ್ತಿಕವಾಗಿ ಆರ್ಥಿಕ ಸಹಾಯವನ್ನೂ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಒಂದು ಮೀನುಗಾರಿಕಾ ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡಿರುವುದು ತೀವ್ರ ನೋವಿನ ಸಂಗತಿ. ಈ ದುರಂತವು ತೀವ್ರ ಆಘಾತವನ್ನು ಉಂಟುಮಾಡಿದೆ. ಸರಕಾರದ ವತಿಯಿಂದ ದೊರೆಯುವ ಪರಿಹಾರದ ಜೊತೆಗೆ, ಸಮಾಜದ ಎಲ್ಲರೂ ಇಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ಬೆನ್ನ ಹಿಂದೆ ನಿಲ್ಲುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದು ನುಡಿದರು.
ಅಗಲಿದವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದರು. ಈ ವೇಳೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
