ಮುಂಡಗೋಡ ಫೆಬ್ರುವರಿ 19: ಬುಡಕಟ್ಟು ಮತ್ತು ಪರಿಶಿಷ್ಟ ತಳಸಮುದಾಯಗಳ ಕಲೆಯ ಘನತೆ, ಶ್ರೀಮಂತಿಕೆ
ಉಳಿಸಿ, ಬೆಳೆಸಿ, ಮುಂದುವರೆಸುವುದಕ್ಕಾಗಿ ನಾಲ್ಕನೇ ಸಾಂಸ್ಕೃತಿಕ ಕಲಾ ಮೇಳ-2026 ಲೊಯೋಲ ವಿಕಾಸ
ಕೇಂದ್ರ, ಮುಂಡಗೋಡದಲ್ಲಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಹಾಗೂ
ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಫೆಬ್ರುವರಿ 21 ರಂದು
ಆಯೋಜಿಸಲಾಗಿದೆ ಎಂದು ಸಂಘಟನಾ ಸಮಿತಿಯ ಗೌರವ ಅಧ್ಯಕ್ಷರಾದ ಬಸವಂತಪ್ಪ ಪೂಜಾರ, ಅಧ್ಯಕ್ಷರು,
ಜನವೇದಿಕೆ, ಮುಂಡಗೋಡ, ಹಾಗೂ ಸಂಘಟನಾ ಸಮಿತಿಯ ಅಧ್ಯಕ್ಷರಾದ ಬೀರು ಭಾಗು ಕಾತ್ರಟ್, ಜನವೇದಿಕೆ
ನಾಯಕರು, ಬ್ಯಾನಳ್ಳಿ ಇವರು ಇಂದಿಲ್ಲಿ ನಡೆದಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಕಲಾಮೇಳವನ್ನು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ,ಕಾರವಾರ ಇವರು ಉದ್ಘಾಟಿಸಲಿದ್ದು,
ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು, ಡಿವಾಯ್ಎಸ್ಪಿ.,ಶಿರಶಿ, ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗಳು, ಮುಂಡಗೋಡ, ಜಂಪಾ ಲಾಮಾ,ಸಾರ್ವಜನಿಕ ಸಂಪರ್ಕ ಅಧಿಕಾರಿ, ಟಿಬೇಟಿಯನ್ ಕ್ಯಾಂಪ್, ಚಂದ್ರಕಾಂತ ಕೋಚರೆಕರ, ಅಧ್ಯಕ್ಷರು, ಉತ್ತರಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ, ಹೊನ್ನಾವರ, ನವೀನ ಸಿದ್ದಿ, ನ್ಯಾಯಾವಾದಿಗಳು ಹಾಗೂ ಸದಸ್ಯರು, ರಾಜ್ಯ ಮಟ್ಟದ ಸಲಹಾ ಸಮಿತಿ, ಹಳಿಯಾಳ ಹಾಗೂ ಫಾ|| ಜೆರಾಲ್ಡ್ ಡಿ’ಸೋಜ, ನಿರ್ದೇಶಕರು, ಸಂತ ಜೋಸೆಫ್ ಕಾನೂನು ಮಹಾವಿದ್ಯಾಲಯ, ಬೆಂಗಳೂರು ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ನಾಲ್ಕನೇ ಸಾಂಸ್ಕೃತಿಕ ಕಲಾಮೇಳದ ಮೂಲಕ ಬುಡಕಟ್ಟು ಹಾಗೂ ತಳ ಸಮುದಾಯಗಳ ಅಸ್ಮಿತೆ ಎತ್ತಿ ಹಿಡಿಯುವ, ಅಳಿವಿನಂಚಿನಲ್ಲಿರುವ ಕಲೆ-ಸಂಸ್ಕೃತಿಯನ್ನು ಸಂರಕ್ಷಿಸುವ, ಸಂವಿಧಾನದ ಆಶಯ ಇಡೇರಿಸುವ ಜೊತೆಗೆ ‘ಬಹುತ್ವ’ ಪರಂಪರೆಯನ್ನು ಬೆಳೆಸುವ ಉದ್ದೇಶವನ್ನು ಸಾಂಸ್ಕೃತಿಕ ಕಲಾಮೇಳ-2026 ಹೊಂದಿದ್ದು,‘ಸಾಮಾಜಿಕ ಸುರಕ್ಷತೆಯತ್ತ ಬುಡಕಟ್ಟು ಮತ್ತು ತಳ ಸಮುದಾಯಗಳು’ ಘೋಷವಾಕ್ಯದ ಅಡಿ ನಡೆಯುವ ಈ ಸಾಂಸ್ಕೃತಿಕ ಕಲಾಮೇಳ ಸಮುದಾಯದ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೊಸ ದೃಷ್ಟಿಕೋನದಿಂದ ಮರು ವ್ಯಾಖ್ಯಾನಿಸಲು ಮುಂದಾಗಿದೆ ಎಂದು ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ಫಾದರ್ ಅನಿಲ್ ಡಿಸೋಜ, ಹೇಳಿದರು.
ಬುಡಕಟ್ಟು ಮತ್ತು ತಳ ಸಮುದಾಯಗಳ ಮುಂದಿರುವ ಅವಕಾಶ ಹಾಗೂ ಸವಾಲುಗಳಾದ ‘ವಿಬಿಜಿ ರಾಮ್ಜಿ ’, ಒಳ ಮೀಸಲಾತಿ, ಅಪೌಷ್ಠಿಕತೆ, ವಲಸೆ, ವಸತಿ ಹಾಗೂ ಭೂಮಿಯ ಹಕ್ಕಿನ ನಿರಾಕರಣೆ ಇತ್ಯಾದಿ ಜ್ವಲಂತ ವಿಷಯಗಳ ಕುರಿತು ಸಂವಾದವೂ ನಡೆಯಲಿದೆ. ಗ್ರಾಮ ಅಭಿವೃದ್ದಿ ಸಮಿತಿಗಳ ಸಾಧನೆಗಳ ಪ್ರದರ್ಶನ,
ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ, ಬುಡಕಟ್ಟು ಹಾಗೂ ತಳ ಸಮುದಾಯಗಳ ಅಭಿವೃದ್ಧಿಗಾಗಿ ತೊಡಗಿಸಿಕೊಂಡ ಸಂಘ-ಸಂಸ್ಥೆಗಳನ್ನು, ಅತಿಥಿಗಳನ್ನು ಹಾಗೂ ಕಲಾ ತಂಡಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ಸಂಘಟನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷೆ ಸರೋಜಾ ಲಮಾಣಿ ಹಾಗೂ
ಸಂಘಟನಾ ಕಾರ್ಯದರ್ಶಿಗಳಾದ ಸುರೇಶ ರಾಠೋಡ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಸವಂತಪ್ಪ ಪೂಜಾರ, ಬೀರು ಭಾಗು ಕಾತ್ರಟ್, ಸರೋಜಾ ಲಮಾಣಿ, ಸುರೇಶ ರಾಠೋಡ, ಫಾ.ಅನಿಲ್ ಡಿಸೋಜ, ಎಲ್ವಿಕೆಯ ತೇಜಸ್ವಿನಿ, ದೀಪಾ ಉಪಸ್ಥಿತರಿದ್ದರು.

