ಪಕ್ಷದ ಹಿರಿಯ ನಾಯಕರು, ತಿಪಟೂರು ಕ್ಷೇತ್ರದ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ತೀವ್ರ ಆಘಾತ ಹಾಗೂ ದುಃಖವನ್ನು ಉಂಟುಮಾಡಿದೆ.
ಸರಳತೆ, ವೈಚಾರಿಕ ಬದ್ಧತೆ, ನಿಷ್ಠೆ ಹಾಗೂ ಜನಪರ ಕಾಳಜಿಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ, ನಂತರ ಪಕ್ಷದ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿದ್ದರು.
ತಿಪಟೂರು ಕ್ಷೇತ್ರದ ಶಾಸಕರಾಗಿ ಹಾಗೂ ರಾಜ್ಯದ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಅಪಾರ.
ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಕೈಗೊಂಡ ಸುಧಾರಣಾ ಕ್ರಮಗಳು ಹಾಗೂ ಪಕ್ಷದ ಸಂಘಟನೆಗೆ ನೀಡಿದ ಕೊಡುಗೆ ಸದಾ ಸ್ಮರಣೀಯ.
ಅವರ ಅಗಲಿಕೆಯಿಂದ ನಮ್ಮ ಪಕ್ಷವು ಒಬ್ಬ ಹಿರಿಯ, ಸಜ್ಜನ ಹಾಗೂ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದೆ. ಜೊತೆಗೆ ನಾಡು ಒಬ್ಬ ಆದರ್ಶ ಜನಪ್ರತಿನಿಧಿಯನ್ನು ಕಳೆದುಕೊಂಡಂತಾಗಿದೆ. ಅವರ ನಿಧನವು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗ, ಬಂಧುಗಳು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏🏻
