ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನದ ನೇಮಕಾತಿಯು ವ್ಯವಸ್ಥಿತವಾಗಿದೆ ಮತ್ತು ಅಲ್ಲಿ ಯಾವುದೇ ರೀತಿಯ ಆರ್ಥಿಕ ವ್ಯವಹಾರಗಳಿಲ್ಲ. ಆದರೆ, ಬಿಜೆಪಿಯಲ್ಲಿನ ನೇಮಕಾತಿ ಮತ್ತು ಸೈದ್ಧಾಂತಿಕ ನಿಲುವುಗಳು ಪ್ರಶ್ನಾರ್ಹವಾಗಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಹರಿತವಾದ ಟೀಕೆಗಳನ್ನು ವ್ಯಕ್ತಪಡಿಸಿದರು.
ನೇಮಕಾತಿ ಪದ್ಧತಿಯಲ್ಲಿ ಬಿಜೆಪಿಗೆ ನೈತಿಕ ಹಕ್ಕಿಲ್ಲ
”ಕಾಂಗ್ರೆಸ್‌ನಲ್ಲಿ ಪೇಮೆಂಟ್ ಕೊಟ್ಟು ಅಧ್ಯಕ್ಷರಾಗುವ ಸಂಪ್ರದಾಯ ಇಲ್ಲ. ಅಷ್ಟೇ ಅಲ್ಲ, ಕೊಲೆ ಪ್ರಕರಣದಲ್ಲಿ ಗಡಿಪಾರಾದವರು, ಪೋಕ್ಸೋ ಆರೋಪಿಗಳು ಅಥವಾ ಜೈಲುವಾಸಿಗಳಾದ ಕ್ರಿಮಿನಲ್‌ಗಳನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಯಾವುದೇ ಕೆಟ್ಟ ಪರಂಪರೆ ನಮ್ಮಲ್ಲಿಲ್ಲ,” ಎಂದು ಹರಿಪ್ರಸಾದ್ ಕಿಡಿಕಾರಿದರು.
ಬಿಜೆಪಿಯ ನಾಯಕತ್ವದ ಆಯ್ಕೆ ಪ್ರಕ್ರಿಯೆಯನ್ನು ಟೀಕಿಸಿದ ಅವರು, “ಪಂಚಾಯ್ತಿ ಚುನಾವಣೆಯನ್ನೂ ಎದುರಿಸದ ನರೇಂದ್ರ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಿದವರು ಯಾರು? ಆ ಜನಾದೇಶ ಯಾವುದು ಎಂದು ಬಿಜೆಪಿ ಮೊದಲು ಇತಿಹಾಸವನ್ನು ಮೆಲುಕು ಹಾಕಲಿ,” ಎಂದು ಸವಾಲು ಹಾಕಿದರು. ಅಲ್ಲದೆ, ಯಾವುದೇ ಚುನಾವಣೆ ಎದುರಿಸದ ಮೋಹನ್ ಭಾಗವತ್ ಅವರು ಯಾವ ಪ್ರಜಾಪ್ರಭುತ್ವದ ಆಧಾರದಲ್ಲಿ ಆರೆಸ್ಸೆಸ್ ಮುಖ್ಯಸ್ಥರಾಗಿದ್ದಾರೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಪಾಕಿಸ್ತಾನದ ವಿಷಯದಲ್ಲಿ ಬಿಜೆಪಿ ದ್ವಂದ್ವ ನೀತಿ
ಬಿಜೆಪಿಯ ಪಾಕಿಸ್ತಾನದ ಮೇಲಿನ ಪ್ರೀತಿ ನಿನ್ನೆ ಮೊನ್ನೆಯದಲ್ಲ ಎಂದು ದೂರಿದ ಅವರು, “ದ್ವಿ-ರಾಷ್ಟ್ರ ಸಿದ್ಧಾಂತದ ಪ್ರತಿಪಾದಕ ಸಾವರ್ಕರ್ ಕಾಲದಿಂದ ಹಿಡಿದು, ಇಂದಿನ ನಾಯಕರವರೆಗೆ ‘ಪಾಕಿಸ್ತಾನದೊಂದಿಗೆ ಮಾತುಕತೆಯ ಬಾಗಿಲು ಮುಚ್ಚಬಾರದು’ ಎಂದು ಹೇಳುವ ಬಿಜೆಪಿಗರು ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ,” ಎಂದು ವ್ಯಂಗ್ಯವಾಡಿದರು.
’ನಕಲಿ ಹಿಂದೂತ್ವದ ಆಟ ಇನ್ನು ನಡೆಯಲ್ಲ’
ಕರ್ನಾಟಕದಲ್ಲಿ ಬಿಜೆಪಿ ಎಂದಿಗೂ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿಲ್ಲ ಎಂದು ಭವಿಷ್ಯ ನುಡಿದ ಹರಿಪ್ರಸಾದ್, “ಆರೆಸ್ಸೆಸ್ ಮತ್ತು ಬಿಜೆಪಿ ಪ್ರತಿಪಾದಿಸುತ್ತಿರುವ ನಕಲಿ ಹಿಂದೂತ್ವವನ್ನು ನಾನು ವಿರೋಧಿಸುತ್ತಲೇ ಬಂದಿದ್ದೇನೆ, ಮುಂದೆಯೂ ಮುಂದುವರಿಸುತ್ತೇನೆ. ರಾಜ್ಯದಲ್ಲಿ ಈ ನಕಲಿ ದೇಶಪ್ರೇಮಿಗಳ ಆಟ ಇನ್ನು ಮುಂದೆ ನಡೆಯುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.
