Tuesday, May 12, 2026
Homeಜಿಲ್ಲಾ ಸುದ್ದಿಗಳುಬಡವರ ಅಕ್ಕಿಗೆ ಕನ್ನ: ಕೂಡ್ಲಿಗಿಯಲ್ಲಿ ನ್ಯಾಯಬೆಲೆ ಅಂಗಡಿ ವಿರುದ್ಧ ಜನಾಕ್ರೋಶ

ಬಡವರ ಅಕ್ಕಿಗೆ ಕನ್ನ: ಕೂಡ್ಲಿಗಿಯಲ್ಲಿ ನ್ಯಾಯಬೆಲೆ ಅಂಗಡಿ ವಿರುದ್ಧ ಜನಾಕ್ರೋಶ

ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಹಶಿಲ್ದಾರ್; ಆಡಳಿತ ವೈಫಲ್ಯದ ವಿರುದ್ಧ ಹಿರಿಯ ಪತ್ರಕರ್ತರ ತೀವ್ರ ಖಂಡನೆ

ಕೂಡ್ಲಿಗಿ:”ಬಡವರ ಹೊಟ್ಟೆ ಹೊಡೆಯುವ ಭ್ರಷ್ಟರಿಗೆ ಶಿಕ್ಷೆಯಾಗಲಿ, ಮೂರು ತಿಂಗಳ ಬಾಕಿ ಅಕ್ಕಿ ಕೂಡಲೇ ವಿತರಣೆಯಾಗಲಿ” ಎಂದು ಆಗ್ರಹಿಸಿ ತಾಲೂಕಿನ ಚಿರಬಿ ಮತ್ತು ಸುತ್ತಮುತ್ತಲಿನ ಐದು ಗ್ರಾಮಗಳ ನೂರಾರು ಜನ ಇಂದು ತಹಶಿಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

ನ್ಯಾಯಕ್ಕಾಗಿ ರಸ್ತೆಗಿಳಿದ ಅನ್ನದಾತರು
ಭಾರತೀಯ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಕಿಸಾನ್ ಸಭಾ (AIKS) ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಚಿರಬಿ, ಹರವದಿ, ಕಾಮಯ್ಯನಹಟ್ಟಿ, ದಿಬ್ಬದಹಳ್ಳಿ ಹಾಗೂ ಗೆದ್ದಲಗಟ್ಟೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪಟ್ಟಣದ ಗಾಂಧಿ ಸ್ಮಾರಕದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಹಶಿಲ್ದಾರ್ ಕಚೇರಿ ತಲುಪಿತು.

ಬಾಕಿ ಅಕ್ಕಿ ವಿತರಣೆ: ಕಳೆದ ಮೂರು ತಿಂಗಳಿನಿಂದ ವಿತರಿಸದ ಅಕ್ಕಿಯನ್ನು ಫಲಾನುಭವಿಗಳಿಗೆ ತಕ್ಷಣ ನೀಡಬೇಕು.

ಭ್ರಷ್ಟಾಚಾರ ತನಿಖೆ:
ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು.

ಕ್ರಿಮಿನಲ್ ಮೊಕದ್ದಮೆ:
ಸಾರ್ವಜನಿಕರ ಹಕ್ಕನ್ನು ಕಸಿದುಕೊಂಡ ವಂಚಕರ ಮೇಲೆ ದೂರು ದಾಖಲಿಸಿ ಜೈಲಿಗಟ್ಟಬೇಕು.

ಅಧಿಕಾರಿಗಳ ನಡೆಗೆ ಆಕ್ರೋಶ: ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ?

ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳೆಯರು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾಗ, ಅದನ್ನು ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ತಹಶಿಲ್ದಾರ್ ವಿ.ಕೆ. ನೇತ್ರಾವತಿ ಅವರು ಆವೇಶಭರಿತರಾಗಿ ಹರಿಹಾಯ್ದರು. “ವಿಡಿಯೋ ಮಾಡಬೇಡಿ” ಎಂದು ಪತ್ರಕರ್ತರಿಗೆ ತಾಕೀತು ಮಾಡಿದ ಘಟನೆ ಪತ್ರಿಕಾ ರಂಗದ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸರು ಕೂಡ ಪತ್ರಕರ್ತರ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹಿರಿಯ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜನರ ಸಮಸ್ಯೆಗಳನ್ನು ವರದಿ ಮಾಡುವುದು ನಮ್ಮ ಕರ್ತವ್ಯ. ಅಧಿಕಾರಿಗಳು ದರ್ಪ ತೋರುವುದನ್ನು ಬಿಟ್ಟು ಪಾರದರ್ಶಕವಾಗಿ ಕೆಲಸ ಮಾಡಲಿ. ಈ ಘಟನೆಯ ಬಗ್ಗೆ ಉನ್ನತಾಧಿಕಾರಿಗಳಿಗೆ ದೂರು ನೀಡಲಾಗುವುದು.” ಎಂದು ಹಿರಿಯ ಪತ್ರಕರ್ತರು ಎಚ್ಚರಿಸಿದ್ದಾರೆ.

ಹೋರಾಟದ ಮುಂಚೂಣಿಯಲ್ಲಿ
ಈ ಬೃಹತ್ ಪ್ರತಿಭಟನೆಯಲ್ಲಿ AIKS ರಾಜ್ಯ ಉಪಾಧ್ಯಕ್ಷರಾದ ಹೆಚ್. ವೀರಣ್ಣ, ಹಿರಿಯ ಮುಖಂಡರಾದ ಬಿ. ಸಿದ್ಲಿಂಗಪ್ಪ, ಸಿಪಿಐ ತಾಲೂಕು ಕಾರ್ಯದರ್ಶಿ ಮೊರಬನಳ್ಳಿ ಕರಿಯಪ್ಪ, ಪಿ.ಎಂ. ಸಿದ್ದಲಿಂಗ ಮೂರ್ತಿ ಸೇರಿದಂತೆ ನೂರಾರು ಮಹಿಳೆಯರು, ಯುವಕರು ಮತ್ತು ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ವರದಿ: ವಿ ಜಿ ವೃಷಭೇಂದ್ರ ಕೂಡ್ಲಿಗಿ

ಹೆಚ್ಚಿನ ಸುದ್ದಿ