Monday, December 23, 2024
Homeರಾಜ್ಯಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಾಗಲಿ: ಬಸವರಾಜ ಬೊಮ್ಮಾಯಿ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಾಗಲಿ: ಬಸವರಾಜ ಬೊಮ್ಮಾಯಿ

ಸಮಾಜದಲ್ಲಿ ದೇವರಿಗೆ ರೂಪ ಕೊಟ್ಟವರು ವಿಶ್ವಕರ್ಮರು : ಬಸವರಾಜ ಬೊಮ್ಮಾಯಿ1

ಬೆಂಗಳೂರು: ವಿಶ್ವಕರ್ಮರ ಅಭಿವೃದ್ದಿಗೆ ಪ್ರಧಾನಮಂತ್ರಿಗಳು 18 ಕಾಯಕಗಳಿಗೆ ಸಾಲ ನೀಡುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ ಅದರ ಸದುಪಯೋಗ ಪಡೆಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಶ್ವ ಕರ್ಮ ಸೇವಾ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ವಿರಾಟ ವಿಶ್ವಕರ್ಮ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಸಂಸದ ತೇಜಸ್ವಿ ಸೂರ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್,
ಮತ್ತಿತರೆ ಗಣ್ಯರು ಸಮ್ಮುಖದಲ್ಲಿ ವಿಶ್ವಕರ್ಮ ಶ್ರೀ, ವಿಶ್ವ ಕರ್ಮ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂತರ ಮಾತನಾಡಿದ ಬಸವರಾಜ ಬೊಮ್ಮಾಯಿ,
ಮನುಷ್ಯನ ನಾಗರಿಕತೆ ಸೃಷ್ಡಿ ಮಾಡಿದವರು ವಿಶ್ವಕರ್ಮರು. ಮನಷ್ಯ ಒಂಟಿ ಜೀವಿಯಾಗಿದ್ದ. ಆಹಾರದಿಂದ ಹಿಡಿದು ಕಾಯಕದವರೆಗೂ ಮನುಷ್ಯನ ಪರಿವರ್ತನೆಯವರೆಗೂ ವಿಶ್ವ ಕರ್ಮರು ಕೊಡಿಗೆ ನೀಡಿದ್ದಾರೆ. ಇಡೀ ವಿಶ್ವದಲ್ಲಿ ವಿಶ್ವ ಕರ್ಮರು ಇದ್ದಾರೆ. ವಿಶ್ವ ಕರ್ಮರು ದೇವರ ಮೂರ್ತಿ ಮಾಡದೇ ಇದ್ದರೆ, ದೇವರ ರೂಪವೇ ಇರುತ್ತಿರಲಿಲ್ಲ. ದೇವರಿಗೆ ಕಲ್ಪನಾತೀತವಾದ ಆಕಾರ ಕೊಡುವ ಕೆಲಸ ವಿಶ್ವಕರ್ಮರು ಮಾಡಿದ್ದಾರೆ. ದೇವರನ್ನು ಸಮಾಜಕ್ಕೆ ಸೃಷ್ಟಿ ಮಾಡಿಕೊಡುವ ಕೆಲಸವನ್ನು ವಿಶ್ವಕರ್ಮರು ಮಾಡುತ್ತಾರೆ. ವಿಶ್ವಕರ್ಮ ರನ್ನು ಬಸಮಾಜದ ಕೆಳ ಮಟ್ಟದಲ್ಲಿ ಇಟ್ಟಿದ್ದೇವೆ. ಅವರನ್ನು ಮೇಲೆ ಇಡಬೇಕು ಎಂದು ಹೇಳಿದರು.
ಯಾವ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ಬೆಲೆ ಇಲ್ಲವೋ ಆ ದೇಶಕ್ಕ ಗೌರವ ಇಲ್ಲ. ವಿಶ್ವಕರ್ಮರಿಗೆ ಕಲೆ ಭಗವಂತ ಕೊಟ್ಟ ವರ. ಬಂಗಾರದ ಗುಣ ಗುರುತಿಸುವ ಕಲೆ ಇರುವುದು ವಿಶ್ವಕರ್ಮರಿಗೆ ಮಾತ್ರ. ವಿಶ್ವ ಕರ್ಮರಿಗೆ ಸಾಕಷ್ಟು ಕಲೆ ಗೊತ್ತಿದ್ದರೂ ಅದನ್ನು ಹೇಳಿಕೊಳ್ಳುವುದಿಲ್ಲ. ನಿಮ್ಮ ಕಲೆಯ ಬಗ್ಗೆ ಕೌಶಲ್ಯದ ಬಗ್ಗೆ ಹೇಳಿಕೊಳ್ಳಬೇಕು. ವಿಶ್ವಕರ್ಮ ಸಮುದಾಯದವರು ಐಎಎಸ್ , ಐಪಿಎಸ್ ಅಧಿಕಾರಿಗಳು ಆಗಬೇಕು ಎಂದರು.
ನಾನು ನನ್ನ ಬಜೆಟ್‌ನಲ್ಲಿ ಸುಮಾರು ಐವತ್ತು ಕಸುಬುಗಳಿಗೆ ಸುಮಾರು ಐವತ್ತು ಸಾವಿರ ರೂ. ವರೆಗೆ ಸಾಲ ನೀಡುವ ಯೋಜನೆ ಜಾರಿಗೆ ತಂದಿದ್ದೆ. ಬಹಳಷ್ಟು ಜನರು ಶ್ರೀಮಂತರು ಮಾತ್ರ ಆರ್ಥಿಕತೆ ಬೆಳೆಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ, ಕೆಳ ಹಂತದ ಕಾರ್ಮಿಕರು ಕೆಲಸ ಮಾಡಿದಾಗ ಮಾತ್ರ ಆರ್ಥಿಕತೆ ಬೆಳೆಯುತ್ತದೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅತ್ಯಂತ ಮಹತ್ವದ್ದು. ವಿಶ್ವಕರ್ಮ ಎಂದರೆ ಅದು ಸಮುದಾಯವಲ್ಲ. ಸಂಸ್ಕೃತಿಯ ಗುಂಪು. ವಿಶ್ವಕರ್ಮ ಸಮುದಾಯದ ಕುಸುರಿ ವಿಶ್ವಖ್ಯಾತಿ ಪಡೆದಿದೆ. ಬೇಲೂರು, ಹಳೇಬೀಡು ಯುನೆಸ್ಕೋ ಪಟ್ಟಿಗೆ ಸೇರಿದ್ದು, ಇದರ ಶ್ರೇಯಸ್ಸು ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದು ಹೇಳಿದರು.
ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ವಿಶ್ವಕರ್ಮರಿಗೆ ಜಗತ್ತಿನಾದ್ಯಂತ ಮನ್ನಣೆ ಇದೆ‌. ಪ್ರತಿಯೊಂದು ವಲಯದಲ್ಲಿ ತನ್ನದೇ ಆದ ವರ್ಣರಂಜಿತ ಕಥೆಗಳಿವೆ. ವಿಶ್ವಕರ್ಮರದ್ದು ಶ್ರೀಮಂತ ಸಂಸ್ಕೃತಿ ಎಂದರು.

ಆಡಳಿತ ಕ್ಷೇತ್ರದಲ್ಲಿ ರಾಜ್ಯ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ, ನಾಗಾಲ್ಯಾಂಡ್ ನ ಉಪ ಪೊಲೀಸ್ ಮಹಾ ನಿರ್ದೇಶಕ ಎನ್. ರಾಜಶೇಖರ್, ಚಿತ್ರದುರ್ಗದ ಸಹಾಯಕ ಆಯುಕ್ತ ವಿವೇಕ್ ಪ್ರಕಾಶ್, ಸಾಹಿತ್ಯ ಕ್ಷೇತ್ರದಲ್ಲಿ ವಿಶ್ವಕರ್ಮ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೆ.ವಿ. ಕೃಷ್ಣ ಮೂರ್ತಿ, ಕ್ರೀಡೆಯಲ್ಲಿ ಮಾಜಿ ಹಾಕಿ ಆಟಗಾರ ಸುನಿಲ್ ವಿಠಲಾಚಾರ್ಯ, ಚಿತ್ರಕಲೆಯಲ್ಲಿ ಬಸವರಾಜ ಕಮ್ಮಾರ ಅವರಿಗೆ ವಿಶ್ವಕರ್ಮ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸ್ಮಾರಕ ಪ್ರಶಸ್ತಿ ವಲಯದಲ್ಲಿ ಖಂಜಿರ ವಿದ್ವಾನ್ ಎಚ್.ಪಿ. ರಾಮಾಚಾರ್ ಪ್ರಶಸ್ತಿಗೆ ವಿಶ್ವ ವಿಖ್ಯಾತ ಖಂಜಿರಾ ವಿದ್ವಾಂಸ ಅಮೃತ್.ಎನ್, ತುಮಕೂರಿನ ಶಿಲ್ಪಿ ದಿ. ಕೆ.ಎಚ್. ರಾಜಶೇಖರಚಾರ್ ಪ್ರಶಸ್ತಿಗೆ ಶಿಲ್ಪಿ ಆರ್. ಚಂದ್ರಚಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿಯನ್ನು ಹಿರಿಯ ನಟಿ ಲಕ್ಷ್ಮೀ ಗೋಪಾಲ ಸ್ವಾಮಿ, ವಾಸ್ತು ಶಿಲ್ಪಿ ನಾಗರಾಜ್ ವಸ್ತಾರೆ, ಯೋಗ ಗುರು ಡಾ.ಎನ್.ಎಸ್. ಓಂಕಾರ್ ಮತ್ತಿತರರಿಗೆ ವಿಶ್ವಕರ್ಮ ಭಾವಚಿತ್ರದ ಸ್ಮರಣಿಕೆ, ಫಲಕ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಮೈಸೂರು ಸಂಸ್ಥಾನದ ಅರಸರಾದ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ವರ್ಚುವಲ್ ಸಂದೇಶ ಹಾಗೂ ಶ್ರೀ ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ವಿಶ್ವಕರ್ಮ ಸಂಸ್ಥಾನ ಪೀಠ ಅನುಗ್ರಹ ಸಂದೇಶ ನೀಡಿದರು.
ಡಾ. ಬಿ.ಎಂ. ಉಮೇಶ್ ಕುಮಾರ್ ಮಾತನಾಡಿ, ವಿಶ್ವಕರ್ಮ ಸಮುದಾಯದಲ್ಲಿ ಈ ಕಾರ್ಯಕ್ರಮ ಶಿಕ್ಷಣ, ಜಾಗೃತಿ, ಪ್ರಚಾರ. ಹಕ್ಕೊತ್ತಾಯ, ಪುನರುತ್ಥಾನದ ಉದ್ದೇಶಗಳನ್ನು ಈ ಕಾರ್ಯಕ್ರಮ ಒಳಗೊಂಡಿದೆ. ವಿಶ್ವಕರ್ಮ ಸಮುದಾಯದ ಏಳಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು “ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವಕರ್ಮ ಮಹೋತ್ಸವ ಮತ್ತಷ್ಟು ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ್ ಐ.ಎ.ಎಸ್ (ನಿ), ಮುಖ್ಯ ಕಾರ್ಯದರ್ಶಿ ಚಂದ್ರಶೇಖರ ಚಾರಿ, ಉಪಾಧ್ಯಕ್ಷರಾದ ಎಸ್. ನಂಜುಂಡ ಪ್ರಸಾದ್, ಶಿಲ್ಪಿ ಹೊನ್ನಪ್ಪ ಚಾರ್ ಮತ್ತಿತರರು ಉಪಸ್ಥಿತರಿದ್ದರು.

  1. ↩︎

ಹೆಚ್ಚಿನ ಸುದ್ದಿ