ಬೆಂಗಳೂರ ಅ 12 :: ಸೆಪ್ಟೆಂಬರ್ ತಿಂಗಳಿನಿಂದ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು, ಲಕ್ಷಾಂತರ ರೈತರಿಗೆ ಅವರ ಜಮೀನಿನ ಹಕ್ಕನ್ನು ಅವರಿಗೆ ನೀಡುವ ಮೂಲಕ ನೆಮ್ಮದಿಯ ಬದುಕು ಕಲ್ಪಿಸಲು ನಮ್ಮ ಸರ್ಕಾರ ಸಂಕಲ್ಪ ತೊಟ್ಟಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸೋಮವಾರ ವಿಕಾಸಸೌಧದ ನಾಲ್ಕನೇ ಮಹಡಿಯ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಾಗುವಳಿ ಮಾಡುವ ರೈತರಿಗೆ ಮಂಜೂರು ಮಾಡಿರುವ ಲಕ್ಷಾಂತರ ಪ್ರಕರಣಗಳಲ್ಲಿ ಹಲವು ವರ್ಷಗಳಿಂದ ಪೋಡಿ ದುರಸ್ಥಿಯಾಗಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಹತ್ತಾರು ಚರ್ಚೆ, ನಾನಾ ಪ್ರಯತ್ನಗಳಾಗಿದ್ದರೂ ಈ ವಿಚಾರದಲ್ಲಿ ಸರಿಯಾದ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಆದರೆ, ರೈತರಿಗೆ ಅವರ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ಅವರಿಗೇ ನೀಡಲು, ಈ ವಿಚಾರದಲ್ಲಿ ಶಾಶ್ವತ ಪರಿಹಾರ ನೀಡಲು ನಮ್ಮ ಸರ್ಕಾರ ಸಂಕಲ್ಪ ತೊಟ್ಟಿದೆ” ಎಂದು ಭರವಸೆ ನೀಡಿದರು.
ಮುಂದುವರೆದು, “ರೈತರಿಗೆ ಜಮೀನು ಮಂಜೂರಾಗಿದ್ರೂ ಪೋಡಿ ದುರಸ್ಥಿಯಾಗದಿರಲು ಎರಡು ಪ್ರಮುಖ ಕಾರಣಗಳಿವೆ. ದಶಕಗಳ ಹಿಂದಿನಿಂದಲೂ ನಮ್ಮ ಅಧಿಕಾರಿಗಳು 100 ಎಕರೆ ಜಮೀನಿದ್ದರೆ ಅದಕ್ಕಿಂತ ಹೆಚ್ಚು ವಿಸ್ತೀಣ ಮಂಜೂರು ಮಾಡಿದ್ದಾರೆ. ಇದೊಂದು ಕಾರಣವಾದರೆ, ಕೆಲವು ಸಂದರ್ಭದಲ್ಲಿ ಸಾಗುವಳಿ ಮಾಡದಂತವರಿಗೂ ಮಂಜೂರು ಮಾಡಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಆರ್‌ಟಿಸಿಯಲ್ಲಿ ಮಂಜೂರುದಾರರ ಹೆಸರಿದೆ. ಆದರೆ, ಅವರಿಗೆ ಮಂಜೂರು ಆಗಿರುವ ಬಗ್ಗೆ ಯಾವುದೇ ನಿಖರ ದಾಖಲೆಗಳಿಲ್ಲ. ಮತ್ತಷ್ಟು ಪ್ರಕರಣಗಳಲ್ಲಿ ಮಂಜೂರಿಗೆ ಅರ್ಜಿ ಕೊಟ್ಟಿರುವ ದಾಖಲೆ ಇದೆ. ಆದರೆ, ಮಂಜೂರು ಆಗಿರುವ ದಾಖಲೆ ಇಲ್ಲ.
ಈ ಎರಡು ಪ್ರಮುಖ ಕಾರಣಗಳಿಂದ ಜಮೀನು ಮಂಜೂರಾಗಿದ್ರೂ ದುರಸ್ಥಿಯಾಗಿಲ್ಲ. ಹೀಗಾಗಿ ರೈತರು ಅಂತಹ ಜಮೀನಿನಲ್ಲಿ ಕೃಷಿ ಮಾಡಬಹುದೇ ವಿನಃ ಅವರಿಗೆ ಆ ಭೂಮಿಯಿಂದ ಬೇರೆ ಯಾವುದೇ ಪ್ರಯೋಜನ ಇಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರೂ ಸೇರಿದಂತೆ ಎಲ್ಲಾ ಸಚಿವ ಒತ್ತಡ ಇದೆ. ಅಲ್ಲದೆ, ರೈತರಿಂದಲೂ ಸಾಕಷ್ಟು ಒತ್ತಡವಿದೆ. ಹೀಗಾಗಿ ಕಳೆದ ಆರೆಂಟು ತಿಂಗಳಿನಿಂದ ಅಧಿಕಾರಿಗಳ ಜೊತೆ ನಿರಂತರ ಚರ್ಚೆ ನಡೆಸಿ ಇದೀಗ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದ್ದೇವೆ. ಯಾರಿಗೆ ಪೋಡಿ ಮಾಡಿಕೊಡಲು ಸಾಧ್ಯವೋ ಅವರಿಗೆಲ್ಲಾ ಪೋಡಿ ಮಾಡಿಕೊಡಲೇಬೇಕು ಎಂದು ನಮ್ಮ ಸರ್ಕಾರದ ಸಂಕಲ್ಪ ಮಾಡಿದ್ದು, ಇದಕ್ಕೆಂದು ಪ್ರಾಯೋಗಿಕ ಆಯಪ್ ಸಿದ್ಧಪಡಿಸಲಾಗಿದೆ” ಎಂದರು
ದುರಸ್ಥಿ ಕೆಲಸವನ್ನು ಕಾಗದದಲ್ಲಿ ಕಾರ್ಯಗತಗೊಳಿಸಿದರೆ ನಮಗೂ ಯಾವುದೇ ಲೆಕ್ಕ ಸಿಗುವುದಿಲ್ಲ. ತಳಮಟ್ಟದ ಅಧಿಕಾರಿಗಳ ಇಚ್ಚೆಯಂತೆಯೇ ಕೆಲಸ ನಡೆಯುತ್ತೇ ವಿನಃ ಜನರಿಗೆ ನ್ಯಾಯ ಸಿಗಲ್ಲ. ಇದೇ ಕಾರಣಕ್ಕೆ ಡಿಜಿಟಲ್ ಆಯಪ್ ಮೂಲಕ ದುರಸ್ಥಿ ಕೆಲಸಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. 1 to 5 ಹಾಗೂ 6 to 10 ಪೋಡಿ ದುರಸ್ಥಿ ಪ್ರಕರಣ ಬಾಕಿ ಇರುವ ಎಲ್ಲಾ ತಾಲೂಕುಗಲ್ಲೂ ನಾವೇ ಹುಡುಕಿ ದಾಖಲೆ ಕಡತ ಸಿದ್ದಪಡಿಸಬೇಕು ಎಂದು ತೀರ್ಮಾನಿಸಿದ್ದೇವೆ. ಹಾಸನದಲ್ಲಿ ಈಗಾಗಲೇ ಪ್ರಾಯೋಗಿಕ ಯೋಜನೆ ನಡೆಯುತ್ತಿದೆ. ಇದರ ಆಧಾರದ ಮೇಲೆ ಸೆಪ್ಟೆಂಬರ್ ತಿಂಗಳಿನಿಂದ ಜನರ ಅರ್ಜಿಗೆ ಕಾಯದೆ ನಾವೇ ಸ್ವಯಂ ಪ್ರೇರಣೆಯಿಂದ ಅಭಿಯಾನದ ಮಾದರಿಯಲ್ಲಿ 1 to 5 ಹಾಗೂ 6 to 10 ಪೋಡಿ ದುರಸ್ಥಿ ಮಾಡಲಿದ್ದೇವೆ ಎಲ್ಲಾ ಮಂಜೂರಿದಾರರ ಪರವಾಗಿ ನಾವೇ ಪ್ರಕ್ರಿಯೆ ಆರಂಭಿಸಲಿದ್ದು, ಇದರಿಂದ ಲಕ್ಷಾಂತರ ಜನರಿಗೆ ಅವರ ಜಮೀನಿನ ಹಕ್ಕನ್ನು ಅವರಿಗೆ ನೀಡದಂತಾಗುತ್ತದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ:
ಪ್ರಕರಣಗಳ ಇತ್ಯರ್ಥಪಡಿಸಲು ಎಷ್ಟೇ ಕಾನೂನುಗಳನ್ನು ಅಳವಡಿಸಿದರೂ ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರಿಗಳು ಬಳಸಿಕೊಂಡು ಜನಸಾಮಾನ್ಯರಿಗೆ ಕಿರಿಕಿರಿ ಮಾಡುತ್ತಿದ್ದಾರೆ.
ಕೆಲವೆಡೆ 50 ಎಕರೆ ಪೋಡಿ ಮಾಡಿಕೊಡಿ ಎಂದರೆ 100 ಎಕರೆ ಮಾಡಿಕೊಟ್ಟಿದ್ದಾರೆ, ಬಡ ರೈತನೊಬ್ಬ ತಾನು ಮಾಡುತ್ತಿರುವ ಸಾಗುವಳಿ ಭೂಮಿಗೆ ದಾಖಲೆಗಳನ್ನು ಮಾಡಿಕೊಳ್ಳಲು ಹೊರಟರೆ ಆತನನ್ನು ಅಲೆದಾಡಿಸುತ್ತಿದ್ದಾರೆ.
ಇದಕ್ಕೆಲ್ಲಾ ಇತಿಶ್ರೀ ಹಾಡುವ ಉದ್ದೇಶದಿಂದಲೇ ಪೋಡಿ ಅಭಿಯಾನ ಆರಂಭಿಸಿದ್ದೇವೆ, ಈ ಸಂದರ್ಭದಲ್ಲಿ ಇಲಾಖಾ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಚೌಕಟ್ಟನಡಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ನಾವು ನಿಮ್ಮ ಮೇಲೆ ಕಠಿಣ ಕ್ರಮ ಜರುಗಿಸಬೇಕಾದೀತು ಎಂದು ಎಚ್ಚರಿಸಿದ್ದೇನೆ ಎಂದರು.
ರಾಜ್ಯಾದ್ಯಂತ 80,000 ಹೆಕ್ಟೇರ್ ಬೆಳೆ ನಾಶ
ಪ್ರಸಕ್ತ ಮುಂಗಾರಿನ ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿದೆ. ಮಳೆಯ ಕಾರಣಕ್ಕೆ ಹಲವೆಡೆ ಒಟ್ಟಾರೆ 80,000 ಹೆಕ್ಟೇರ್ ಬೆಳೆ ನಾಶವಾಗಿದ್ದು, ಈ ವಾರದೊಳಗಾಗಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಪಸಕ್ತ ಸಾಲಿನ ಮಳೆ ಪ್ರಮಾಣದ ವಿವರ, ಮಳೆಹಾನಿ ಹಾಗೂ ಇಲಾಖೆ ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ನೀಡಿದ ಅವರು, “ಉತ್ತರ ಒಳನಾಡಿನಲ್ಲಿ ವಾಡಿಕೆ ಪ್ರಕಾರ 260 ಮಿ.ಮೀ ಮಳೆಯಾಗಬೇಕು ಆದರೆ, ಪ್ರಸ್ತುತ 322 ಮಿ.ಮೀ ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ.೨೪ ರಷ್ಟು ಹೆಚ್ಚು ಮಳೆಯಾಗಿದೆ. ಮಲೆನಾಡು ಭಾಗದಲ್ಲಿ 1127 ಮಿ.ಮೀ ವಾಡಿಕೆ ಮಳೆ ಪ್ರಮಾಣವಾಗಿದ್ದು, ಪ್ರಸ್ತುತ 1361 ಮಿ.ಮೀ ಅಂದರೆ ಶೇ.21ರಷ್ಟು ಹೆಚ್ಚು ಮಳೆಯಾಗಿದೆ. ಕರಾವಳಿ ಭಾಗದಲ್ಲಿ ವಾಡಿಕೆಯ ಮಳೆ 2299 ಮಿ.ಮೀ ಆಗಿದ್ದು, ಪ್ರಸ್ತುತ 2947 ಮಿ.ಮೀ ಅಂದರೆ ಶೇ.೨೮ ರಷ್ಟು ಮಳೆಯಾಗಿದೆ. ರಾಜ್ಯಾದ್ಯಂತ ಸರಾಸರಿ ಮಳೆಯ ಪ್ರಮಾಣ 553 ಮಿ.ಮೀ ಆಗಿದ್ದು, ಪ್ರಸ್ತುತ 699 ಮಿ.ಮೀ ಮಳೆಯಾಗಿದ್ದು, ಈ ಪ್ರಮಾಣ ಶೇ.26ರಷ್ಟು ಹೆಚ್ಚು. ವಿಶೇಷವೆಂದರೆ ಈ ವರ್ಷ ಯಾವ ಜಿಲ್ಲೆಯಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿಲ್ಲ” ಎಂದರು.
ಮುಂದುವರೆದು, “ಕಳೆದ ತಿಂಗಳು ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಕೊರತೆ ಎದುರಾಗಿತ್ತು. ಕೋಲಾರ ಚಿಕ್ಕಬಳ್ಳಾಪುರ ಯಾದಗಿರಿ ಕೊಪ್ಪಳ, ವಿಜಯಪುರ, ರಾಯಚೂರು ಪ್ರದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ, ಕಳೆದ 10 ದಿನಗಳ ಹಿಂದೆ ಆ ಭಾಗಗಳಲ್ಲೂ ಸಹ ಉತ್ತಮ ಮಳೆಯಾಗಿದೆ. ಅಲ್ಲದೆ, ಆಗಸ್ಟ್ 16 ರಿಂದ ಮುಂಗಾರು ಮತ್ತೆ ಚುರುಕಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮುಂಗಾರಿನ ಪ್ರಭಾವ ಉತ್ತಮವಾಗಿರುವ ಬಗ್ಗೆ ಮಾಹಿತಿ ಇದೆ. ಈ ವರ್ಷ ವಾಡಿಕೆಗಿಂತ ಭಿತ್ತನೆಯೂ ಹೆಚ್ಚಾಗಿದ್ದು, ಒಳ್ಳೆಯ ಕೃಷಿ ಚಿತ್ರಣ ಕಾಣುವ ನಿರೀಕ್ಷೆ ಇದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಇದಲ್ಲದೆ, “ಮುಂಗಾರಿನ ಪ್ರಭಾವ ಇನ್ನೂ ಒಂದೂವರೆ ತಿಂಗಳು ಇರಲಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಮಧ್ಯ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ
ಹಾಗೂ ಕೃಷ್ಣ-ಕಾವೇರಿ ನದಿಪಾತ್ರದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಈ ಎಲ್ಲಾ ಭಾಗದಲ್ಲೂ ಅನಗತ್ಯ ನೆರೆಸ್ಥಿತಿಯನ್ನು ತಡೆಯಲು ಮುಂಜಾಗ್ರತಾ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಮಳೆಯಾಗುವ ಸಂದರ್ಭದಲ್ಲಿ ನದಿ ಉಕ್ಕಿಹರಿಯುತ್ತದೆ, ಇದೇ ವೇಳೆ ಅಣೆಕಟ್ಟೆಗಳಿಂದಲೂ ನೀರು ಹರಿಸಿದರೆ ಪ್ರವಾಹ ಸ್ಥಿತಿ ಉಂಟಾಗಿ ಜನ ಪರಿತಪಿಸುವ ಸ್ಥಿತಿ ಎದುರಾಗುತ್ತದೆ. ಹೀಗಾಗಿ ಅಣೆಕಟ್ಟೆಗಳು ತುಂಬುವವರೆಗೂ ಕಾಯದೆ ಜಲಾಶಯಗಳ ಒಳಹರಿವನ್ನು ನಿಯಮಿತವಾಗಿ ಬಿಡುಗಡೆ ಮಾಡುವ ಮೂಲಕ ನೆರೆಯನ್ನು ನಿಯಂತ್ರಿಸಬಹುದು. ಈ ಮಾದರಿಯ ನೀರಿನ ನಿರ್ವಹಣೆ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಲ್ಲದೆ, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳು ಹಾಗೂ ಗುಡ್ಡದ ಅಂಚಿನಲ್ಲಿ ಕುಸಿದುಬೀಳುವ ಸಾಧ್ಯತೆಗಳಿರುವ ಮನೆಗಳನ್ನು ಗುರುತಿಸಿ ಜನವಾಸ ನಿಷೇಧಿಸಲು ಹಾಗೂ ಜನರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಕ್ಕೆ ರವಾನಿಸುವಂತೆಯೂ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಜೀವಹಾನಿ ತಪ್ಪಿಸಲು ಮುಂಜಾಗ್ರತಾ ಕ್ರಮ
ಪ್ರಸ್ತುತ ಮಳೆಗಾಲದಲ್ಲಿ ಉಂಟಾಗಿರುವ ಜೀವಹಾನಿಯ ಬಗ್ಗೆಯೂ ಮಾಹಿತಿ ನೀಡಿದ ಸಚಿವರು, “ಈ ವರ್ಷ ಪ್ರಾಣಹಾನಿಯ ಸಂಖ್ಯೆಯನ್ನೂ ನಿಯಂತ್ರಿಸಲಾಗಿದೆ ಎಂದರು.
“2019ರಲ್ಲಿ ಇದೇ ದಿನಕ್ಕೆ 67 ಜನ ಮೃತಪಟ್ಟಿದ್ದರು. 2022ರ ಮಳೆಗಾಲದಲ್ಲಿ 75 ಜನ ಮೃತಪಟ್ಟಿದ್ದರು. ಆದರೆ, ಈ ವರ್ಷ 58 ಜನ ಮೃತಪಟ್ಟಿದ್ದು, ಸರ್ಕಾರದ ಮುಂಜಾಗ್ರತಾ ಕ್ರಮಗಳಿಂದಾಗಿ ಸಾವಿನ ಸಂಖ್ಯೆಯನ್ನು ಇಳಿಸಲಾಗಿದೆ. ಆದರೂ, ಯಾವುದೇ ಜೀವಕ್ಕೂ ಒಂದು ಮೌಲ್ಯವಿದೆ. ಪ್ರತಿಯೊಬ್ಬರ ಜೀವವನ್ನು ಕಾಯುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜೀವಹಾನಿಯಂತಹ ಅನಾಹುತ ತಪ್ಪಿಸಲು ಮತ್ತಷ್ಟು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆಗಸ್ಟ್ 15ನೇ ತಾರೀಖಿನ ನಂತರ ಮಲೆನಾಡು ಕರಾವಳಿ, ಕಾವೇರಿ-ಕೃಷ್ಣ ಜಲಾಶಯ ಪಾತ್ರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆವಹಿಸಲಾಗಿದೆ. ಅಲ್ಲದೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮಹತ್ವದ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ವಿ, ಪ್ರಾದೇಶಿಕ ಆಯುಕ್ತರಾದ ಆದಿತ್ಯ ಬಿಸ್ವಾಸ್, ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಹಾಗೂ ಕರ್ನಾಟಕ ವಿಪತ್ತು ನಿರ್ವಹಣಾ ಇಲಾಖೆ ಆಯುಕ್ತರಾದ ಶಿವಕುಮಾರ್ ಉಪಸ್ಥಿತರಿದ್ದರು.