ವಿಜಯಪುರ : “ಪುಸ್ತಕ ಎಂಬುದು ಕೇವಲ ಕಾಗದದ ಹಾಳೆಗಳ ಗುಚ್ಛವಲ್ಲ, ಅದು ಜ್ಞಾನದ ದೀಪ ಮತ್ತು ಭವಿಷ್ಯದ ದಾರಿ ತೋರಿಸುವ ಆತ್ಮೀಯ ಗೆಳೆಯ. ಒಂದು ಉತ್ತಮ ಪುಸ್ತಕವು ಮಗುವಿನ ಭವಿಷ್ಯವನ್ನೇ ಬದಲಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ” ಎಂದು ಬಿಜೆಪಿ ರಾಜ್ಯ ಮುಖಂಡರು ಹಾಗೂ ವಕೀಲರಾದ ರವಿ ಖಾನಾಪುರ ಅವರು ಅಭಿಪ್ರಾಯಪಟ್ಟರು.
ನಗರದ ವೀನಸ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ‘ಬಸವ-ಭೀಮ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಪಾಲ್ಗೊಂಡು ಅವರು ಮಾತನಾಡಿದರು. ಶಿಬಿರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಟ್ರಸ್ಟ್ ಪರವಾಗಿ ಪುಸ್ತಕಗಳನ್ನು ಪ್ರಶಸ್ತಿಯ ರೂಪದಲ್ಲಿ ವಿತರಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರವಿ ಖಾನಾಪುರ ಅವರು, “ನಮ್ಮ ಬಸವ-ಭೀಮ ಚಾರಿಟೇಬಲ್ ಟ್ರಸ್ಟ್ ಒಂದು ಉದಾತ್ತ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಜಗತ್ತಿಗೆ ಸಂಸ್ಕಾರ, ಸಮಾನತೆ ಮತ್ತು ಕಾಯಕದ ಮೌಲ್ಯಗಳನ್ನು ನೀಡಿದ ಅಣ್ಣ ಬಸವಣ್ಣನವರು ಹಾಗೂ ದೇಶಕ್ಕೆ ಸಂವಿಧಾನ, ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ದಾರಿ ತೋರಿದ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಲು ನಮ್ಮ ಟ್ರಸ್ಟ್ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜದ ಏಳಿಗೆಗಾಗಿ ನಾವು ಹಮ್ಮಿಕೊಳ್ಳುವ ಇಂತಹ ಕಾರ್ಯಗಳಿಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಸಹಕಾರ ಸದಾ ಇರಲಿ” ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷರಾದ ಶ್ರೀಪಾದ್ ಜೋಶಿ, ನಿರ್ದೇಶಕರಾದ ಪ್ರಮೋದ್ ಪಾಟೀಲ್, ಶಿಕ್ಷಕರಾದ ಖಂಡೇಕರ್ ಹಾಗೂ ವೀನಸ್ ಅಕಾಡೆಮಿಯ ಸಿಬ್ಬಂದಿ ವರ್ಗ ಮತ್ತು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
