ಬೆಂಗಳೂರು, ಜ.6: ರಾಜ್ಯದಲ್ಲಿರುವ ಕೈಗಾರಿಕೆಗಳು ತಮ್ಮ ಆರ್ಥಿಕ ಪ್ರಗತಿಯ ಜೊತೆಗೆ ಪರಿಸರ ಸುಸ್ಥಿರತೆಯನ್ನೂ ಕಾಯ್ದುಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.
ನಗರದಲ್ಲಿಂದು ಫಾರ್ವರ್ಡ್ ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ ಪರಿಸರ ಸುಸ್ಥಿರತೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನೈಸರ್ಗಿಕ ಸಂಪನ್ಮೂಲದ ಹಿತಮಿತ ಬಳಕೆ, ಮರುಬಳಕೆ ಮತ್ತು ಪುನರ್ ಬಳಕೆಗೆ ಒತ್ತು ನೀಡಿದರೆ ಮಾತ್ರ ಪರಿಸರ ಪ್ರಕೃತಿ ಉಳಿಸಲು ಸಾಧ್ಯ ಎಂದರು.
3ನೇ ಬೃಹತ್ ಉದ್ಯಾನ ಕನಸಿನ ಯೋಜನೆ:ಖಂಡ್ರೆ
ಉತ್ತಮ ಸುಸ್ಥಿರ ಪರಿಸರ ನೀತಿಯಿದ್ದರೆ ಸಾಲದು ಅದರ ಉತ್ತಮ ಅನುಷ್ಠಾನ ಆದಾಗ ಮಾತ್ರ ಪರಿಣಾಮ ಬೀರಲು ಸಾಧ್ಯ. ಕೊರೊನಾ ಸಮಯದಲ್ಲಿ ಸಾವಿರಾರು ಜನರು ಆಮ್ಲಜನಕ ಸಿಗದೆ ಮೃತಪಟ್ಟರು. ನಮಗೆ ಉಚಿತವಾಗಿ ಆಮ್ಲಜನಕ ನೀಡುವ ವೃಕ್ಷ ಸಂರಕ್ಷಣೆಯನ್ನು ನಾವೇ ಮಾಡಬೇಕು, ಮರ ಗಿಡ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ಪರಿಸರ ಉಳಿಸಲು ಹಸಿರೀಕರಣವೇ ಪರಿಹಾರವಾಗಿದೆ. ಇದನ್ನು ಮನಗಂಡು ಅರಣ್ಯ ಸಚಿವರಾಗಿ ತಾವು ನೀಲಗಿರಿ ಬೆಳೆಸಿದ್ದ ಬೆಂಗಳೂರಿನ 153 ಎಕರೆಯಲ್ಲಿ 3ನೇ ಅತಿ ದೊಡ್ಡ ವಿಶ್ವಗುರು ಬಸವಣ್ಣ ಜೈವಿವೈವಿಧ್ಯ ಉದ್ಯಾನ ನಿರ್ಮಾಣಕ್ಕೆ ಸಂಪುಟ ಅನುಮೋದನೆ ಪಡೆದಿದ್ದು, 2 ವರ್ಷದೊಳಗಾಗಿ ಇದರ ಲೋಕಾರ್ಪಣೆ ಮಾಡಲು ಸಂಕಲ್ಪಿಸಲಾಗಿದೆ. ಇದು ತಮ್ಮ ಕನಸಿನ ಯೋಜನೆಯಾಗಿದೆ ಎಂದರು.
ಪ್ರಕೃತಿ, ಪರಿಸರ ಉಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಶೇ.21ರಷ್ಟು ಹಸಿರು ಹೊದಿಕೆ ಇದ್ದು, ಇದನ್ನು ಶೇ.33ಕ್ಕೆ ತರಬೇಕು. ಆದರೆ ಇದಕ್ಕೆ ಅಗತ್ಯವಾದ ಅರಣ್ಯಭೂಮಿ ಇಲ್ಲ. ಹೀಗಾಗಿ ರಸ್ತೆಯ ಎರಡೂ ಬದಿ ಗಿಡ ಮರ ಬೆಳೆಸಲು ಆದ್ಯತೆ ನೀಡಲಾಗುತ್ತಿದೆ ಎಂದರು.
ಅರಣ್ಯ ಇಲಾಖೆ ಹೊರತಂದಿರುವ 2026ನೇ ಸಾಲಿನ ದಿನದರ್ಶಿ (ಕ್ಯಾಲೆಂಡರ್) ಅನ್ನು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಇಂದು ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ ಹಾಜರಿದ್ದರು.
ಪರಿಸರವನ್ನು ನಾವು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ. ಇಲ್ಲದಿದ್ದರೆ ಸುನಾಮಿ, ಭೂಕಂಪ, ಮೇಘಸ್ಫೋಟ, ಸೌರಾಘಾತ, ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿಯಂತಹ ವಿಕೋಪ ಎದುರಿಸಬೇಕಾಗುತ್ತದೆ. ಜೊತೆಗೆ ಒಂದೇ ದಿನ ಒಂದು ವಾರದ ಮಳೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಬೆಳೆಹಾನಿ, ಜೀವಹಾನಿ, ಜಾನುವಾರು ಹಾನಿ ಮತ್ತು ಮನೆ ಹಾನಿ ಮಾಡುತ್ತದೆ. ಇದಕ್ಕೆ ವೃಕ್ಷ ಸಂವರ್ಧನೆ, ವೃಕ್ಷ ಸಂರಕ್ಷಣೆ, ಪರಿಸರ ಸಂರಕ್ಷಣೆಯೇ ಪರಿಹಾರ ಎಂದರು.
ಸಂಸ್ಕರಣೆ ಆಗದ ಮಲತ್ಯಾಜ್ಯ, ಗೃಹ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಜಲ ಮೂಲ ಸೇರದಂತೆ ಎಚ್ಚರಿಕೆ ವಹಿಬೇಕು. ಏಕ ಬಳಕೆ ಪ್ಲಾಸ್ಟಿಕ್, ಇ-ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಇರುವ ಒಂದೇ ಭೂಮಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಜತನವಾಗಿ ಹಸ್ತಾಂತರಿಸಬೇಕು. ಈ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸಮಾರಂಭದಲ್ಲಿ ನವದೆಹಲಿಯ ವಿಶ್ವ ಯುವ ಕೇಂದ್ರದ ಸಿಇಓ ಉದಯ್ ಶಂಕರ್ ಸಿಂಗ್, ಪಶು ಸಂಗೋಪನಾ ಇಲಾಖೆ ಜಂಟಿ ಆಯುಕ್ತ ಡಾ. ಮಹೇಶ್, ಪಿ ಸುಬ್ರಮಣಿ, ಉಪನ್ಯಾಸಕ ಮಹೇಶ್ಚಂದ್ರ ಗುರು ಸೇರಿದಂತೆ ಹಲವುರು ಪಾಲ್ಗೊಂಡಿದ್ದರು.
