Tuesday, February 10, 2026
Homeಜಿಲ್ಲಾ ಸುದ್ದಿಗಳುನುಡಿದಂತೆ ನಡೆದ ಬರಗೂರು- ಸತೀಶ ಕುಲಕರ್ಣಿ

ನುಡಿದಂತೆ ನಡೆದ ಬರಗೂರು- ಸತೀಶ ಕುಲಕರ್ಣಿ

ಶಿಗ್ಗಾಂವ: ಬದುಕು ಮತ್ತು ಬರವಣಿಗೆ ಒಂದಾಗಿರಬೇಕು. ಬದುಕಿಗೆ ಅರ್ಥ ಬರಬೇಕಿದ್ದರೆ, ಬದ್ಧತೆಯ ಬದುಕು ನಮ್ಮದಾಗಬೇಕು. ಈ ನಿಟ್ಟಿನಲ್ಲಿ ನುಡಿದಂತೆ ನಡೆದವರು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಇಂದು ನಡೆದ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ಧ ಭಾರತ ಪುಸ್ತಕ ಜನಾರ್ಪಣೆ ಮಾಡಿ ಅವರು ಮಾತನಾಡಿದರು. ಕರ್ನಾಟಕ‌ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪ ಅವರು, 100ಕ್ಕೂ ಹೆಚ್ಚು ತಳ ಸಮುದಾಯಗಳ ಕುರಿತು ಅಧ್ಯಯನ ಮಾಡಿಸಿದ್ದರು. ಈ ಮೂಲಕ ಅಸ್ಥಿತ್ವವೇ ಅರಿಯದ ತಳ ಸಮುದಾಯಗಳ ಬದುಕಿನ ಅನಾವರಣ ಮಾಡಿದ್ದರು ಎಂದು ಕುಲಕರ್ಣಿ ಮಾತನಾಡಿದರು. ಇದಲ್ಲದೇ, ವಹಿಸಿಕೊಂಡ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ, ಸಮಾನತೆ, ಸಹಬಾಳ್ವೆ, ಸಾಮರಸ್ಯದ ಬದುಕಿಗೆ ತಮ್ಮದೇ ಆದ ವಿಶಿಷ್ಠ ಕೊಡುಗೆ ನೀಡಿದ ಕೀರ್ತಿ ಬರಗೂರು ರಾಮಚಂದ್ರಪ್ಪ ಅವರದ್ದು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ ಭಾಸ್ಕರ್ ಅವರು, ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ಧ ಭಾರತದ ಕೃತಿಯ ಆಶಯ ಇಡೇರಬೇಕಿದ್ದರೆ, ನಮ್ಮ ಮನೆಯಿಂದಲೆ ಮೊದಲು ಸೌಹಾರ್ಧ, ಸಮಾನತೆಯ ಬದುಕು ಆರಂಭವಾಗಬೇಕು ಎಂದರು. ಸಂವಿಧಾನವೇ ನಮ್ಮ ಧರ್ಮ ಎಂದು ಪ್ರತಿಪಾದಿಸಿದ ಅವರು, ಇಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆ ಸರಿದಾರಿಗೆ ಬರಲು ಸಂವಿಧಾನ ಸಹಕಾರಿಯಾಗಿದೆ ಎಂದರು.

ಕೃತಿಯ ಕುರಿತು ಮಾತನಾಡಿದ ಸಹಾಯಕ‌ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ‌ ಮಾನ್ಪಡೆ, ಮಾನವೀಯತೆ, ಮೌಲ್ಯ, ಬ್ರಾತೃತ್ವ ಮತ್ತು ಸೌಹಾರ್ಧತೆ ಮಾಯವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪನವರ ಸೌಹಾರ್ಧ ಭಾರತ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಕೆ ಶಿವಶಂಕರ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಡಾ.ರುದ್ರಪ್ಪ ಕರಿಶೆಟ್ಟಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಗಿರೇಗೌಡ ಅರಳಿಹಳ್ಳಿ ಸ್ವಾಗತಿಸಿದರೆ, ಡಾ.‌ವೆಂಕನಗೌಡ ಪಾಟೀಲ ವಂದಿಸಿದರು. ಡಾ.ಚಂದ್ರಪ್ಪ ಸೊಬಟಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೊ.ರಾಜಶೇಖರ ಕುಂಬಾರ, ಎನ್.ಎಲ್ ನಾರಾಯಣಸ್ವಾಮಿ, ರೇಖಾ ಕಲ್ಮಠ, ಉಮೇಶ ಮಾಳಗಿ, ಜುಬೇದಾ ನಾಯಕ, ಪ್ರಥ್ವಿರಾಜ ಬೆಟಗೇರಿ, ರೇಣುಕಾ ಗುಡಿಮನಿ, ನೇತ್ರಾವತಿ, ಅನೀತಾ, ಶಿವಯೋಗಿ ಸೇರಿದಂತೆ ಹಲವು ಜನ ಉಪಸ್ಥಿತರಿದ್ದರು.

ಸಂಪಾದಕರು : ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ