ಚಿತ್ರದುರ್ಗ: ರೈತ ನಾಯಕ ಬಿ ಎಸ್ ಯಡಿಯೂರಪ್ಪ ಅವರು ನೀರಿಲ್ಲದ ಜಿಲ್ಲೆಗಳಿಗೆ ನೀರು ನೀಡಿದ ಭಗೀರಥ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಬಣ್ಣಿಸಿದ್ದಾರೆ.
ಬಿಎಸ್ವೈ ಅಭಿಮಾನೋತ್ಸವದಲ್ಲಿ ಇಂದು ಮಾತನಾಡಿದ ಅವರು, ಯಡಿಯೂರಪ್ಪ ಅವರ ಹೆಸರಲ್ಲೇ ಶಕ್ತಿ ಇದೆ. ಇಡೀ ಕರ್ನಾಟಕದಲ್ಲಿ ಬಡವರ ಮನೆಯಲ್ಲಿ, ಮನದಲ್ಲಿ, ದೀನ ದಲಿತರ ಹೃದಯದಲ್ಲಿ ಯಾವುದಾದರೂ ಹೆಸರು ಮಿಡಿಯುತ್ತಾ ಇದ್ದರೆ ಅದು ಯಡಿಯೂರಪ್ಪ ಅವರದು ಎಂದರು.

ಕೋಟೆ ನಾಡು, ಮದಕರಿ ನಾಯಕನ ಬೀಡು, ಬಿಸಿಲು ಮತ್ತು ಬರಗಾಲ ಪೀಡಿತ ಚಿತ್ರದುರ್ಗಕ್ಕೆ ಶಾಶ್ವತವಾಗಿ ನೀರು ಉಣಿಸಲು ಭದ್ರತಾ ಮೇಲ್ದಂಡೆ ಯೋಜನೆ ಜಾರಿ ಮಾಡಿದವರು. ಮುಖ್ಯಮಂತ್ರಿಗಳಾದ ತಕ್ಷಣ ಮೊದಲ ನಿರ್ಧಾರವೇ ಬಿಸಿಲಿನ ನಾಡಿಗೆ ತಂಪು ನೀಡುವುದಾಗಿತ್ತು. ಅದಕ್ಕಾಗಿ ನಿರ್ಣಯ ಮಾಡಿದವರು. ವಾಣಿವಿಲಾಸ ಸಾಗರಕ್ಕೆ ಐದು ಟಿಎಂಸಿ ನೀರು ಕೊಟ್ಟವರು, ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯಲು ನೀರು ನೀಡಿದರು, ನೀರಾವರಿ ನೀರು ಒದಗಿಸಿದರು ಎಂದರು.
ವಿರೋಧ ಪಕ್ಷದಲ್ಲಿ ಇದ್ದಾಗ ಹೋರಾಟ ಮಾಡಿದ ಬಿಎಸ್ವೈ ಅವರು ಅಧಿಕಾರಕ್ಕೆ ಬಂದಾಗ ಆ ಹೋರಾಟದ ಬೇಡಿಕೆಗಳಿಗೆ ಕಾಯಕಲ್ಪ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ಎಂದರು. ಬಿಜಾಪುರದಲ್ಲಿ, ಶಿಗ್ಗಾಂವಿಯಲ್ಲಿ, ಚಾಮರಾಜ ನಗರದಲ್ಲಿ ಕೆರೆ ತುಂಬಿಸುವ ಯೋಜನೆಗಳಿಗೆ ಚಾಲನೆ ನೀಡಿದರು. ಗಂಗೆ ಮಾತೆಯನ್ನು ಭೂತಾಯಿಗೆ ಉಣಿಸಿ ರೈತರ ಬೆವರು ಸೇರಿದರೆ ಬಂಗಾರದ ಬೆಳೆ ಬೆಳೆಯಲು ಅವಕಾಶ ನೀಡಿದವರು ಯಡಿಯೂರಪ್ಪ ಎಂದರು.
ಸುಳ್ಳು ಹೇಳಿ ಜನರನ್ನು, ಜನಾಂಗವನ್ನು ದಾರಿ ತಪ್ಪಿಸಿ ಅಧಿಕಾರಕ್ಕಾಗಿ ರಾಜಕಾರಣದ ಮಾಡುವವರ ನಡುವೆ ಪ್ರಾಮಾಣಿಕವಾದ ಜನಪರವಾದ ಜನನಾಯಕ ತಾವು ಎಂಬುದನ್ನು ರಾಜ್ಯಕ್ಕೆ ತೋರಿಸಿದವರು ಯಡಿಯೂರಪ್ಪ ಎಂದರು.
ಹುಟ್ಟು ಹೋರಾಟಗಾರ ಬಿಎಸ್ವೈ…
ಕಾಗಿನೆಲೆ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಸೇರುವ ಕಾರ್ಯಕ್ರಮ ಇದಾಗಿದೆ. ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ಸೈಕಲ್ ಮೇಲೆ ಹೋದವರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮಿಸಿದವರು ಎಂದರು.
ಕನಕದಾಸ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಬಿಎಸ್ವೈ ಅವರ ಕೊಡುಗೆ ದೊಡ್ಡದಿದೆ. ಅವರ ಅಧಿಕಾರದ ಅವಧಿಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನ ನೀಡಿದರು ಎಂದರು
ಬಿಎಸ್ವೈ ಅವರು ಬದ್ಧತೆಯ ವ್ಯಕ್ತಿ. ಒಂದು ಬಾರಿ ಮಾತು ನೀಡಿದರೆ ಹಿಂಜರಿಯುವುದಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಸಾಕಷ್ಟು ಅನುದಾನ ನೀಡಿದವರು. ಬಿಎಸ್ವೈ ಅವರ ಬಗ್ಗೆ, ಸಾಧನೆಗಳ ಬಗ್ಗೆ ಮಾತನಾಡಲು ಹೆಚ್ಚು ಹೊತ್ತು ಬೇಕು. ಅವರಿಗೆ ದೇವರು ಆಯುಸ್ಸು ನೀಡಿ ಜನರ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು. ವಿವಿಧ ಮಠಗಳ ಸ್ವಾಮೀಜಿಗಳು ಬಿಎಸ್ವೈ ಅವರ ಸಾಧನೆಯ ಮತ್ತು ಜನಸೇವೆ ಕುರಿತು ಮಾತನಾಡಿ ಶುಭ ಹಾರೈಸಿದರು.
