ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಾದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಗಳಿಂದ ಸಮಾಲೋಚನೆ ಮತ್ತು ಚಿಕಿತ್ಸೆಗೆ ಬಂದಿದ್ದ ಒಟ್ಟು 55 ರೋಗಿಗಳು ನಾಪತ್ತೆಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಸುಮಾರು 20 ತಿಂಗಳ ಅವಧಿಯಲ್ಲಿ ಈ ಎಲ್ಲಾ ರೋಗಿಗಳು ನಾಪತ್ತೆಯಾಗಿದ್ದು, ಈ ಪೈಕಿ ಇದುವರೆಗೂ ಮೂವರು ರೋಗಿಗಳ ಸುಳಿವೇ ಸಿಕ್ಕಿಲ್ಲವೆಂಬ ಮಾಹಿತಿ ಬಹಿರಂಗವಾಗಿದೆ.
2024ರ ಜನವರಿ 1ರಿಂದ 2025ರ ಆಗಸ್ಟ್ 14ರವರೆಗೆ ನಾಪತ್ತೆಯಾದ ಹೆಚ್ಚಿನ ರೋಗಿಗಳು ಅತ್ಯಂತ ಅನಿರೀಕ್ಷಿತ ಸಂದರ್ಭಗಳಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ರೋಗಿಗಳ ಪೋಷಕರು ಬಿಲ್ಗಳನ್ನು ಪಾವತಿಸಲು, ಔಷಧಿ ಖರೀದಿಸಲು, ಫೋನ್ ಕರೆಗಳಲ್ಲಿ ನಿರತರಾಗಿದ್ದಾಗ ಅಥವಾ ಹೊರರೋಗಿ ವಿಭಾಗದಲ್ಲಿ ಇತರರೊಂದಿಗೆ ಅನುಭವ ಹಂಚಿಕೊಳ್ಳುವ ವೇಳೆ ಈ ಘಟನೆಗಳು ನಡೆದಿವೆ ಎಂದು ದಾಖಲೆಗಳು ತಿಳಿಸುತ್ತವೆ.
ನಿಮ್ಹಾನ್ಸ್ನ ಉಪ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಚ್.ಆರ್ ಮಾತನಾಡಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೆಲವರಿಗೆ ಓಡಿಹೋಗುವ ಪ್ರವೃತ್ತಿ ಇರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ನಾವು ಅವರನ್ನು ಪತ್ತೆಹಚ್ಚಿ ಕುಟುಂಬಗಳಿಗೆ ಹಿಂತಿರುಗಿಸುತ್ತೇವೆ. ಆಸ್ಪತ್ರೆಯಲ್ಲಿ ನಾಪತ್ತೆಯಾದವರ ಪ್ರಕರಣಗಳನ್ನು ಪರಿಶೀಲಿಸಲು ವಿಶೇಷ ಘಟನೆ ವರದಿ ಸಮಿತಿಯಿದೆ ಎಂದರು. ನಾಪತ್ತೆಯಾಗುವವರಲ್ಲಿ ಹೆಚ್ಚಿನವರು ಸ್ಕಿಜೋಫ್ರೇನಿಯಾ, ಬೈಪೋಲಾರ್ ಅಸ್ವಸ್ಥತೆಗಳಿಂದ ಬಳಲುತ್ತಿದ್ದು, ಕೆಲವರಿಗೆ ಬುದ್ಧಿಮಾಂದ್ಯತೆ ಇರುವುದೂ ಕಂಡುಬಂದಿದೆ ಎಂದು ತಿಳಿಸಿದರು.
