ಯಾದಗಿರಿ: ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ರೈತರ ಕೃಷಿ ಚಟುವಟಿ ಕಡಿಮೆಯಾಗಿ, ಕೃಷಿ ಕೂಲಿಕಾರರಿಗೆ ಕೆಲಸ ಸಿಗದೆ, ತಮ್ಮ ಕುಟುಂಬ ನಿರ್ವಹಣೆ ಮಾಡಲು ಕೂಲಿ ಕೆಲಸಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಾನವ ದಿನ ಸೃಜನೆ ಮಾಡಲು ಪ್ರತಿ ಗ್ರಾಮ ಪಂಚಾಯಿತಿಗೆ ನೀಡಿದ ಗುರಿಗೆ ಅನುಸಾರ ಕೂಲಿಕಾರರಿಗೆ ಕೆಲಸ ಕೊಡಿ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಶ್ರೀ ಸಿಬಿ ದೇವರಮನಿ ಅವರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮೇ.15ರಂದು ಯಾದಗಿರಿ ತಾಲೂಕಿನ ಮುಂಡರಗಿ, ರಾಮಸಮುದ್ರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪ್ರಗತಿ, ಗುಣಮಟ್ಟ ಹಾಗೂ ಭೌತಿಕ ಸ್ಥಿತಿ ವೀಕ್ಷಿಸಿ, ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಹಿಂದಿನ ವರ್ಷದಲ್ಲಿ ನರೇಗಾ ಯೋಜನೆಯಡಿ ಅನುಷ್ಟಾನಗೊಳಿಸಿ ಅಪೂರ್ಣ ಮಾಡಿದ ಕಾಮಗಾರಿಗಳಲ್ಲಿ ಬಾಕಿ ಉಳಿದ ಕೂಲಿ ಹಣಕ್ಕೆ ಲೆಕ್ಕ ಹಾಕಿ ಕಾರ್ಮಿಕರಿಗೆ ಕೆಲಸ ಕೂಡಬೇಕು. ನರೇಗಾ ಯೋಜನೆಯಡಿ ಕೆಲಸ ಇಲ್ಲ ಎಂದು ಹೇಳಬೇಡಿ, ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿ ಎಂದು ಸೂಚಿಸಿದರು.
ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಕೂಲಿ ಕೆಲಸ ಕೊಡುವುದರ ಜತೆಗೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಿಸುವ ಬಹುಕಾಲ ಬಾಳಿಕೆ ಬರುವ ಗ್ರಾಮೀಣ ಆಸ್ತಿ ಸೃಜನೆ ಮಾಡುವುದು ನರೇಗಾ ಯೋಜನೆ ಮೂಲ ಉದ್ದೇಶ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರ ದಿನದ ಕೂಲಿ ಹಣ ನೇರವಾಗಿ ಅವರ ಆಧಾರ ಸಂಖ್ಯೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಜಾಬ್ ಕಾಡ್೯ ಪಡೆದ ಪ್ರತಿಯೊಬ್ಬ ಫಲಾನುಭವಿಗಳು ತಪ್ಪದೇ ತಮ್ಮ ಜಾಬ್ ಕಾಡ್೯ಗೆ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾಡ್೯ಗೆ ಇ-ಕೆವೈಸಿ ಮಾಡಿಸುವುದು ಸರಕಾರ ಕಡ್ಡಾಯಗೊಳಿಸಿದೆ. ಇ-ಕೆವೈಸಿ ಆದ ನಂತರ ಆಧಾರ್ ಆಧಾರಿತ ವ್ಯವಸ್ಥೆ ಮೂಲಕ ಕೂಲಿ ಹಣ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಇ-ಕೆವೈಸಿ ಮಾಡಿಸದ ಕಾರ್ಮಿಕರ ಜಾಬ್ ಕಾಡ್೯ಗಳನ್ಮು ರದ್ದುಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮುಂಡರಗಿ, ರಾಮಸಮುದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯತ ನರೇಗಾ ಯೋಜನೆ ಎಡಿಪಿಸಿ ಬನ್ನಪ್ಪ ಬೈಟಪುಲ್ಲಿ, ನರೇಗಾ ಯೋಜನೆ ಜಿಲ್ಲಾ ಐಇಸಿ ಸಂಯೋಜಕ ಪರಶುರಾಮ ಜೀನಕೇರಾ, ಗ್ರಾಮ ಪಂಚಾಯತಿ ಸಿಬ್ಬಂದಿ, ಕಾಯಕ ಬಂದುಗಳು ಹಾಗೂ ನರೇಗಾ ಕೂಲಿಕಾರ್ಮಿಕರು ಇದ್ದರು.
