Friday, March 27, 2026
HomeUncategorizedನಂದವಾಡಗಿ ಏತ ನೀರಾವರಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕ್ರಮ – ಎಂ.ಡಿ. ಕುಲಕರ್ಣಿ

ನಂದವಾಡಗಿ ಏತ ನೀರಾವರಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕ್ರಮ – ಎಂ.ಡಿ. ಕುಲಕರ್ಣಿ

ಲಿಂಗಸುಗೂರು, ಫೆ.28:
ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪೂರ ಜಲಾಶಯದ ಹಿನ್ನೀರಿನಿಂದ ನಡೆಯುತ್ತಿರುವ ನಂದವಾಡಗಿ ಏತ ನೀರಾವರಿ ಯೋಜನೆ 36 ಸಾವಿರ ಎಕ್ಟರ್ ಜಮೀನಿಗೆ ನೀರು ಒದಗಿಸುವ ಗುರಿ ಹೊಂದಿದೆ. ಕಳೆದ 7–8 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಕೆಲವು ಭಾಗಗಳಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಕುಲಕರ್ಣಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಮೂರು ಹಂತದ ಹನಿ ನೀರಾವರಿ ಮಾದರಿಯಲ್ಲಿ ರೂಪಿಸಲಾಗಿತ್ತು. ಆದರೆ ಈ ಭಾಗದಲ್ಲಿ ಹನಿ ನೀರಾವರಿ ಸಾಧಕವಲ್ಲದ ಕಾರಣ ಹಾಗೂ ರೈತರು ಮತ್ತು ಜನಪ್ರತಿನಿಧಿಗಳ ಒತ್ತಡದಿಂದ ಮಧ್ಯಪ್ರದೇಶ ಮಾದರಿಯ ಪ್ರತಿ ಎರಡು ಎಕ್ಟರಿಗೆ ಹರಿನೀರಾವರಿ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಎಲ್.ಟಿ. ಕಂಪನಿಯಿಂದ ಲಿಫ್ಟ್ ವ್ಯವಸ್ಥೆಯ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ತೆಹಲ್ ಕಂಪನಿಯ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ವಿಳಂಬಕ್ಕೆ ಕಾರಣವಾಗಿದೆ. ಮೂರನೇ ಹಂತದಲ್ಲಿ ಎನ್.ಡಿ. ವಡ್ಡರ್ ಕಂಪನಿಯಿಂದ ಕಾಮಗಾರಿ ನಡೆದಿದ್ದು, ಭೂಸ್ವಾಧೀನ ಹಾಗೂ ರೈತರಿಗೆ ಪರಿಹಾರ ಪಾವತಿಯಲ್ಲಿ ವಿಳಂಬವಾಗಿರುವುದರಿಂದ ಕೆಲಸ ಹಿಂದುಳಿದಿದೆ ಎಂದು ವಿವರಿಸಿದರು.
ಪ್ರತಿ ಎರಡು ಎಕ್ಟರ್ ಜಮೀನಿಗೆ ನೀರು ಬಿಡಲಾಗುವುದು. ಅಲ್ಲಿಂದ ರೈತರು ಚೆಕ್ ಡ್ಯಾಂ ಹಾಗೂ ಸ್ಪ್ರಿಂಕ್ಲರ್ ವ್ಯವಸ್ಥೆಯ ಮೂಲಕ ಹರಿನೀರಾವರಿಯಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಅಂದಾಜು 3,500 ಕೋಟಿ ರೂ. ಗುತ್ತಿಗೆದಾರರ ಬಿಲ್ ಪಾವತಿ ಬಾಕಿ ಉಳಿದಿದ್ದು, ಸರ್ಕಾರದಿಂದ ಹಣ ಬಿಡುಗಡೆಯಾದ ಬಳಿಕ ಮುಂದಿನ ದಿನಗಳಲ್ಲಿ ಬಾಕಿ ಮೊತ್ತ ಪಾವತಿಸಲಾಗುವುದು ಎಂದರು.
ಇಂದು ಬೆಳಿಗ್ಗೆಯಿಂದಲೇ ನಂದವಾಡಗಿ ಏತ ನೀರಾವರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದು, ಈಗಿರುವ ಸಾಮಗ್ರಿಗಳನ್ನು ಬಳಸಿ ಯೋಜನೆಗೆ ಮತ್ತೆ ಚಾಲನೆ ನೀಡಲಾಗುವುದು. ಸಾಧ್ಯವಾದಷ್ಟು ತೀವ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ರಾಂಪೂರ ಏತ ನೀರಾವರಿ ಪೂರ್ವ ಭಾಗದಲ್ಲಿ ಕಾಲುವೆ ತೋಡಲಾಗಿದ್ದು, ಇದು ಮೂರನೇ ಹಂತದ ಕಾಮಗಾರಿ ವ್ಯಾಪ್ತಿಗೆ ಬರುತ್ತದೆ. ಮಾರ್ಚ್ ತಿಂಗಳಲ್ಲಿ ಕ್ಲೋಝರ್ ಕಾಮಗಾರಿ ಕೈಗೊಳ್ಳಲಾಗುವುದು. ನಿರ್ವಹಣೆಗೆ ಸೀಮಿತ ಅನುದಾನವಿರುವುದರಿಂದ ಸಣ್ಣಪುಟ್ಟ ಕಾಮಗಾರಿ ಕೈಗೊಳ್ಳಲಾಗುವುದು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಬೇರೆ ವಿಭಾಗದಿಂದ ಪರಿಶೀಲನೆ ನಡೆಸಿ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಾರಾಯಣಪೂರ ಬಲದಂಡೆ ಅಧುನಿಕರಣ ಕಾಮಗಾರಿಗೆ ಸಂಬಂಧಿಸಿದಂತೆ ಹಲವು ದೂರುಗಳಿದ್ದು, ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿ ಬಳಿಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ನಾನು ಈ ಭಾಗದವನೇ ಆಗಿದ್ದು, ನಂದವಾಡಗಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ವಿಶೇಷ ಕಾಳಜಿ ವಹಿಸಲಾಗುವುದು ಎಂದು ಹೇಳಿದರು.
ಮೊದಲ ಹಂತದಲ್ಲಿ ತೆಹಲ್ ಕಂಪನಿಗೆ 288 ಕೋಟಿ ರೂ., ಎರಡನೇ ಹಂತದಲ್ಲಿ 384 ಕೋಟಿ ರೂ., ಮೂರನೇ ಹಂತದಲ್ಲಿ ಎನ್.ಡಿ. ವಡ್ಡರ್ ಕಂಪನಿಗೆ 463 ಕೋಟಿ ರೂ. ಬಿಲ್ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ಜಿ.ಜಿ. ಪವಾರ, ಎಸ್.ಇ. ಆರ್.ಜಿ. ರಾಠೋಡ, ಕಾರ್ಯನಿರ್ವಾಹಕ ಅಭಿಯಂತರ ಸುರೇಂದ್ರ ರೆಡ್ಡಿ, ಎಇಇಗಳಾದ ನಾಗೇಶ್, ಚಂದ್ರಕಾಂತ ಮದ್ದಯ್ಯ, ಮಲ್ಲಪ್ಪ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆ.ಬಿ.ಜೆ.ಎನ್. ಸಂಸ್ಥೆಯಲ್ಲಿ 2000 ರಿಂದ 3000 ಕೋಟಿ ರೂ.ವರೆಗೆ ಗುತ್ತಿಗೆದಾರರ ಬಿಲ್ ಪಾವತಿ ಬಾಕಿ ಇದ್ದು, ಸರ್ಕಾರದಿಂದ ಹಣ ಬಿಡುಗಡೆಯಾದ ಬಳಿಕ ಮುಂದಿನ ದಿನಗಳಲ್ಲಿ ಪಾವತಿ ಮಾಡಲಾಗುವುದು ಎಂದು ಎಂ.ಡಿ. ಕುಲಕರ್ಣಿ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ