Tuesday, March 10, 2026
Homeಜಿಲ್ಲಾ ಸುದ್ದಿಗಳುಮಾಧ್ಯಮ ಹಬ್ಬ ಪ್ರಶಸ್ತಿ ಗೆದ್ದ ಪತ್ರಿಕೋದ್ಯಮ ವಿದ್ಯಾರ್ಥಿಗಳು

ಮಾಧ್ಯಮ ಹಬ್ಬ ಪ್ರಶಸ್ತಿ ಗೆದ್ದ ಪತ್ರಿಕೋದ್ಯಮ ವಿದ್ಯಾರ್ಥಿಗಳು

ಶಿಗ್ಗಾಂವ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೆಳಗಾವಿ ಕಂದಾಯ ವಿಭಾಗ ವ್ಯಾಪ್ತಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಮಾಧ್ಯಮ ಹಬ್ಬ ಸ್ಪರ್ಧೆಗಲ್ಲಿ ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಿಸಿ, ನಗದು ಬಹುಮಾನ ಹಾಗೂ ಪ್ರಶಸ್ತಿ ವಿಜೇತರಾಗಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಎರಡು ದಿನಗಳು ನಡೆದ ಬೆಳಗಾವಿ ಕಂದಾಯ ವಿಭಾಗ ವ್ಯಾಪ್ತಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ನಡೆದ ಮಾಧ್ಯಮ ಹಬ್ಬ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಸಂಗನಗೌಡ ಹೂವನ್ನವರ, ಸುಜಾತಾ ಮಾಮಲೇಪಟ್ಟಣಶಟ್ಟರ್, ದೀಪಾ ಕೊಪ್ಪದ, ದೇವರಾಜ ಹಂಚಿನಮನಿ, ಪ್ರವೀಣ ಅರಳಿಕಟ್ಟಿ ಭಾಗವಹಿಸಿ, ಕಿರು ಸಂದರ್ಶನ ಸ್ಪರ್ಧೆಯಲ್ಲಿ ದ್ವಿತೀಯ, ಪಿಟಿಸಿ ಸ್ಪರ್ಧೆಯಲ್ಲಿ ದ್ವಿತೀಯ, ಸ್ಕ್ರೀಪ್ಟ್ ಹಾಗೂ ವರದಿ ಬರವಣಿಗೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ವಿಭಾಗ ಹಾಗೂ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ವೆಂಕನಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣಪತ್ರ, ಪಾರಿತೋಷಕವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಅವರು ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಶಂಕರಪ್ಪ ವಣಿಕ್ಯಾಳ, ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎ.ಎಸ್ ಬಾಲಸುಬ್ರಮಣ್ಯ, ಹಿರಿಯ ಪತ್ರಕರ್ತರಾದ ಬಂಡು ಕುಲಕರ್ಣಿ, ಮಲ್ಲಿಕಾರ್ಜುನ ಸಿದ್ದಣ್ಣವರ, ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಂಜಯಕುಮಾರ್ ಮಾಲಗತ್ತಿ ಉಪಸ್ಥಿತರಿದ್ದರು.

ಸತತ ಅಧ್ಯಯನಶೀಲತೆಯಲ್ಲಿ ತೊಡಗುವ ಮೂಲಕ ಮಾಧ್ಯಮ ಹಬ್ಬದಲ್ಲಿ ಪ್ರಶಸ್ತಿ ಪಡೆದುಕೊಂಡಿರುವ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮತ್ತು ಅವರಿಗೆ ಅತ್ಯುತ್ತಮ ತರಬೇತಿ ನೀಡುತ್ತಿರುವ ವಿಭಾಗದ ಉಪನ್ಯಾಸಕರಿಗೆ ಅಭಿನಂದನೆಗಳು. ಭವಿಷ್ಯದಲ್ಲಿ ಪತ್ರಿಕೋದ್ಯಮ ವಿಭಾಗ, ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಲೆಂದು ಹಾರೈಸುತ್ತೇನೆ. ಪ್ರೊ.ಟಿ. ಎಂ ಭಾಸ್ಕರ್ ಕುಲಪತಿ, ಕರ್ನಾಟಕ ಜಾನಪದ ವಿವಿ ಗೊಟಗೋಡಿ.

ಪ್ರಶಸ್ತಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳು

ಹೆಚ್ಚಿನ ಸುದ್ದಿ